ಮಾರಣಾಂತಿಕ ಹಲ್ಲೆ, ಮೃತ್ಯು: ಇಬ್ಬರ ಬಂಧನ
ಬಂಧಿತರನ್ನು ಸುಳ್ಯ ಕಸಬ ನಿವಾಸಿ ಮೊಹಮ್ಮದ್ ರಫೀಕ್ (41), ಸುಳ್ಯ ಸಂಪಾಜೆ ನಿವಾಸಿ ಮನೋಹರ್ ಕೆ.ಎಸ್. ಯಾನೆ ಮನು (42) ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ:
ಸುಳ್ಯ ಕಸ್ಬಾ ಗ್ರಾಮದ ನಿವಾಸಿ ಸುಮಯ್ಯಾ (35) ಎಂಬವರ ದೂರಿನಂತೆ, ಅವರ ಪತಿ ಅಬ್ದುಲ್ ಜಬ್ಬಾರ್ ಎಂಬವರನ್ನು 16.10.2025 ರಂದು ಮಧ್ಯಾಹ್ನ ವೇಳೆ, ಆರೋಪಿಗಳಾದ ಮೊಹಮ್ಮದ್ ರಫೀಕ್ ಮತ್ತು ಇತರರು, ಬಾಡಿಗೆಯ ನೆಪದಲ್ಲಿ ದುಗ್ಗಲಡ್ಕ ಎಂಬಲ್ಲಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿ, ಅಲ್ಲಿಂದ ಸುಳ್ಯ ಕಲ್ಲುಗುಂಡಿಗೆ ಕರೆತಂದು ಮಾರಣಾಂತಿಕ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿ ಕಳುಹಿಸಿರುತ್ತಾರೆ.
ಮಾತ್ರವಲ್ಲದೇ 17.10.2025 ರಂದು ಅಬ್ದುಲ್ ಜಬ್ಬಾರ್ ಅವರು ಮನೆಯಲ್ಲಿದ್ದಾಗ ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ದೂರುದಾರರ ಪತಿ ಅಬ್ದುಲ್ ಜಬ್ಬಾರ್‌ನ ಸಾವಿಗೆ ರಪೀಕ್ ಪಡು ಮತ್ತು ಇತರರು ಕಾರಣರಾಗಿರುತ್ತಾರೆ ಎಂಬುದಾಗಿ 18.10.2025 ರಂದು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 125/2025, ಕಲಂ: 105 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ನಡೆಸಿದ ಹಲ್ಲೆಯ ಪರಿಣಾಮ ಅಬ್ದುಲ್ ಜಬ್ಬಾರ್ ಅವರು ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿರುವುದರಿಂದ ಈ ಪ್ರಕರಣವನ್ನು ಕಲಂ: 103 ಜೊತೆಗೆ 3(5) BNS ರಂತೆ ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿದೆ.