ಮುಂದಿನ ವರ್ಷದಿಂದ ಉಚಿತ ಪಠ್ಯಪುಸ್ತಕ ಜತೆಗೆ ಉಚಿತ ಬರೆಯುವ ಪುಸ್ತಕ: ಮಧು ಬಂಗಾರಪ್ಪ
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ತಾಲೂಕಿಗೆ ಈಗಾಗಲೇ 2 ಕೆಪಿಎಸ್ ಶಾಲೆಗಳು ಮಂಜೂರಾಗಿದ್ದು ಇನ್ನೂ ಐದು ಕೆಪಿಎಸ್ ಶಾಲೆಗಳ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ಹಂಚಿ ಹೋಗಿರುವ ಶಾಲೆಗಳಲ್ಲಿ ವಾಹನ ವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನು ನೀಡಿ ಒಗ್ಗೂಡಿಸಿದರೆ ಕೊರತೆ ನಿವಾರಣೆಯ ಜತೆ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯ. ಗ್ರಾಮೀಣ ಪ್ರದೇಶವಾದ ಉಜಿರೆಯಲ್ಲಿ ಕೃಷ್ಣ ಪಡುವೆಟ್ನಾಯರು ಮತ್ತು ವಿಜಯರಾಘವ ಪಡುವೆಟ್ನಾಯರು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದ್ದು, ಶಾಲೆಯ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿದ ಕೀರ್ತಿ ಹೆಗ್ಗಡೆಯವರಿಗೆ ಸಲ್ಲುತ್ತದೆ. ಗ್ರಾಮೀಣ ಪ್ರದೇಶದ ಜನರ ಬಹುದೊಡ್ಡ ಬೇಡಿಕೆ ಕನ್ನಡ ಮಾಧ್ಯಮ ಶಾಲೆ. ಸಚಿವ ಮಧು ಬಂಗಾರಪ್ಪ ಅವರು 4500 ಕನ್ನಡ ಮಾಧ್ಯಮ ಶಾಲೆಗೆ ಆಂಗ್ಲ ಮಾಧ್ಯಮ ಅನುಮತಿ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಳಕ್ಕೆ 51 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.
ವಿ.ಪ. ಶಾಸಕ ಎಸ್.ಎಲ್. ಭೋಜೇ ಗೌಡ ಮಾತನಾಡಿ, ಸ್ವಾಸ್ಥ್ಯ ಸಮಾಜ, ಭಾವೈಕ್ಯತೆ ಉಳಿಸುವ ಮೂಲಕ ಮಕ್ಕಳಿಗೆ ಜೀವನ ಶಿಕ್ಷಣ ನೀಡಬೇಕಾಗಿದೆ. ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣದ ನಿಯಮಗಳು ಸಡಿಲಗೊಳಿಸಲು ಸದನ ಸಮಿತಿ ರಚಿಸಲಾಗಿದ್ದು ಕೆಲವೇ ದಿನಗಳಲ್ಲಿ ನಡೆಯಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿಯನ್ನು ನಡೆಸುತ್ತಿವೆ. ಶೇ.40 ಸರ್ಕಾರೀ ಹಾಗೂ ಶೇ.60 ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ಶಿಸ್ತು ಕಲಿಯುತ್ತಿದ್ದಾರೆ. ಕ್ಷೇತ್ರದ ಧರ್ಮಸ್ಥಳ ಗ್ರಾಮೋದ್ಯೋಗ ಸಂಸ್ಥೆ, ಕೆರೆ ಅಭಿವೃದ್ಧಿ, ಸ್ತ್ರೀ ಶಕ್ತಿ, ಆರ್ಥಿಕ ಸಬಲೀಕರಣ ಮೊದಲಾದ ಜನೋಪಯೋಗಿ ಯೋಜನೆಗಳನ್ನು ಬಣ್ಣಿಸಲು ಅಸಾಧ್ಯ. ನಾಡು, ನುಡಿ, ಧರ್ಮ, ಸಾಹಿತ್ಯ, ಸ್ವಾಸ್ಥ್ಯ ಸಮಾಜದ ನಿರ್ಮಾಣ ಮೊದಲಾದ ಸಮಾಜಮುಖಿ ಕೆಲಸಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣ ಕ್ರಾಂತಿಗೆ ಕಾರಣವಾಗಿದೆ. ನಾವಿಂದು ಮಾನವೀಯತೆಯ ಮೌಲ್ಯ ಮರೆತುಹೋಗಿ ಸಂಬಂಧಗಳು ಉಳಿದಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಶುಭಾಶಿರ್ವಾದ ನೀಡಿ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಊರವರು, ಸಮಿತಿ ಪದಾಧಿಕಾರಿಗಳು ಅಭಿಮಾನದಿಂದ ಸಂಭ್ರಮದಿಂದ ಆಚರಿಸಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಕೃತಜ್ಞತೆ ಸಲ್ಲಿಸಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಹೇಮಾವತಿ ವೀ. ಹೆಗ್ಗಡೆ, ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಶ್ರೀ ನಾರಾಯಣ ಗುರು ನಿಗಮ ರಾಜ್ಯಾಧ್ಯಕ್ಷ ಮಂಜುನಾಥ ಪೂಜಾರಿ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಸಮಿತಿ ಪ್ರಧಾನ ಸಂಚಾಲಕ ಮೋಹನ್ ಕುಮಾರ್ ಉಜಿರೆ, ಕಾರ್ಯದರ್ಶಿ ಅಬೂಬಕ್ಕರ್, ಕೋಶಾಧಿಕಾರಿ ಮೋಹನ್ ಶೆಟ್ಟಿಗಾರ್, ಕಾರ್ಯಕ್ರಮ ಸಂಯೋಜಕ ಬಿ. ಸೋಮಶೇಖರ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ನಾಯ್ಕ ಪಿ., ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್, ವಿದ್ಯಾರ್ಥಿ ನಾಯಕಿ ಶೆಝ ಫಾತಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳನ್ನು ಡಾ. ಹೆಗ್ಗಡೆಯವರು ಹಾಗೂ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ಅಬೂಬಕ್ಕರ್ ವಂದಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಿ. ಸೋಮಶೇಖರ ಶೆಟ್ಟಿ ಹಾಗೂ ಡಾ. ಅನನ್ಯ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶಾಲೆಯ ಹಿರಿಯ ವಿದ್ಯಾರ್ಥಿ ರಜತ್ ಮಯ್ಯ ತಂಡದವರಿಂದ ಸಂಗೀತ ಕಾರ್ಯಕ್ರಮ, ಎಸ್‌ಡಿಎಂ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಎಸ್‌ಡಿಎಂ ಕಲಾ ವೈಭವ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಉಜಿರೆಯ ಮಂದಾರ ಕಲಾವಿದರಿಂದ ‘ಮಾಯೊದ ತುಡರ್’ ತುಳು ಭಕ್ತಿಪ್ರಧಾನ ಹಾಸ್ಯ ನಾಟಕ ಅಭಿನಯಿಸಲ್ಪಟ್ಟಿತು.
ಅನೇಕ ಪ್ರಗತಿಪರ ಕಾರ್ಯಗಳಿಗೆ ಶಿಕ್ಷಣವೇ ಅಡಿಪಾಯ. ಶಿಕ್ಷಣದಿಂದಲೇ ಮುಕ್ತಿ. ಶಿಕ್ಷಣದಿಂದ ಅನೇಕ ಪ್ರಗತಿಪರ ಕೆಲಸಗಳಾಗಿವೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಬಾರದು ಎಂಬ ಉದ್ದೇಶದಿಂದ ಕ್ಷೇತ್ರದಿಂದ ಶಾಲೆಗಳಿಗೆ ಬೆಂಚು, ಡೆಸ್ಕು, ನೈತಿಕ ಮೌಲ್ಯದ ಪುಸ್ತಕಗಳು, ಯೋಗ, ಅತಿಥಿ ಶಿಕ್ಷಕರರು ಮೊದಲಾದ ಅನೇಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಆಂಗ್ಲ ಮಾಧ್ಯಮದ ಮುಂದೆ ಕನ್ನಡ ಮಾಧ್ಯಮಗಳು ಸೊರಗಬಾರದು. ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಸಾಧನೆಯಲ್ಲಿ ಹಿಂದಿಲ್ಲ, ಅವರಿಂದಲೂ ಸಾಕಷ್ಟು ಕೊಡುಗೆಗಳು ಸಿಗುತ್ತಿರುವುದು ಶ್ಲಾಘನೀಯ. -ಡಾ. ಡಿ. ವೀರೇಂದ್ರ ಹೆಗ್ಗಡೆ.
ಶಾಲಾ ಶತಮಾನೋತ್ಸವ ಪ್ರಯುಕ್ತ ನಡೆದ ತಿಂಗಳುವಾರು ಕಾರ್ಯಕ್ರಮಗಳ ಸಿಂಹಾವಲೋಕನ ಸಾಕ್ಷ್ಯಚಿತ್ರ ಪ್ರದರ್ಶನ, ವಾರ್ಷಿಕ ವರದಿ, ಶಾಲಾ ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ಸಮಿತಿ ವತಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ.

