ತಲಪಾಡಿಯಿಂದ ಕಾರವಾರದ ವರೆಗೆ ಹೊಸ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ಪ್ರಸ್ತಾವನೆ
ಉಡುಪಿ: ಕರಾವಳಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ವಿಪರೀತವಾಗುತ್ತಿದ್ದು, ದಿನನಿತ್ಯ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಆ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗವಾದ ತಲಪಾಡಿಯಿಂದ ಬೈಂದೂರು ಮೂಲಕ ಕಾರವಾರದ ವರೆಗೆ ರೈಲ್ವೆ ಹಳಿಗಳ ಸನಿಹದಲ್ಲಿ ಹೊಸ ಎಕ್ಸ್‌ಪ್ರೆಸ್ ಹೈವೇ ರಚಿಸುವಂತೆ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಯೋಜನೆಯಿಂದ ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶವಾಗಲಿದೆ. ಮಂಗಳೂರಿನಿಂದ ಗೋವಾದ ವರೆಗೆ ಕರಾವಳಿ ಕರ್ನಾಟಕ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭವಾಗಲಿದೆ ಎಂದು ಕೋಟ ಉಲ್ಲೇಖಿಸಿದ್ದಾರೆ
ಆಗುಂಬೆ (ಎನ್.ಎಚ್ 169ಎ) ಶೃಂಗೇರಿ, ಅಗಲಗುಂಡಿ, ಜಯಪುರ, ಬಾಳೆಹೊನ್ನೂರು, ಹೈರಂಬಿ, ಆಲ್ದೂರು, ನದಿಪುರ, ಚಿಕ್ಕಮಗಳೂರು ಸಂಪರ್ಕದ ಸರಿಸುಮಾರು ೧೨೦ ಕಿ.ಮೀ ಪಿ.ಡಬ್ಲ್ಯೂ.ಡಿ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿ ಮಾಡಬೇಕು. ಅದರಿಂದ ಶೃಂಗೇರಿಯಂಥ ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತಾದಿಗಳು ಹಾಗೂ ಕೃಷಿ ಪ್ರದೇಶದಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಂಸದ ಕೋಟ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಕುಂದಾಪುರ, ಕೋಟೇಶ್ವರ, ಹಾಲಾಡಿ, ಸೋಮೇಶ್ವರ, ಆಗುಂಬೆ ಶೃಂಗೇರಿ ತಲುಪುವ ೮೮ ಕಿ.ಮೀ ರಸ್ತೆಯನ್ನು ಎನ್.ಎಚ್ ಆಗಿ ಘೋಷಿಸಿ ಅಭಿವೃದ್ಧಿಪಡಿಸಲು ಸಂಸದ ಕೋಟ ಮನವಿ ಮಾಡಿದ್ದಾರೆ.