ಬೆಳ್ತಂಗಡಿಯಲ್ಲಿ ಒಮ್ಮೆ ಮುಚ್ಚಿ ಮತ್ತೆ ತೆರೆದ ಇಂದಿರಾ ಕ್ಯಾಂಟೀನ್
ಉಜಿರೆ: ಕೆಲದಿನಗಳ ಹಿಂದೆ ಉದ್ಘಾಟಿಸಲ್ಪಟ್ಟ ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗೆ ನಿರ್ವಹಣೆಯ ಅನುದಾನ ಬಿಡುಗಡೆಯಾಗದೆ ನೌಕರರಿಗೆ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಕಾರ್ಯಾಚರಣೆ ನಿಲ್ಲಿಸಿತ್ತು.
ಬಳಿಕ ಈ ಬಗ್ಗೆ ಉನ್ನತ ಮಟ್ಟದ ಮಾತುಕತೆ ನಡೆದಿದ್ದು ನಿರ್ವಹಣೆ ಅನುದಾನ ನೀಡುವ ಭರವಸೆ ಸಿಕ್ಕಿದ ಬಳಿಕ ಬುಧವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಮತ್ತೆ ತೆರೆದುಕೊಂಡಿತು.
ಬಹು ವರ್ಷಗಳಿಂದ ಬೆಳ್ತಂಗಡಿಯ ಜನತೆ ನಿರೀಕ್ಷಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಹಲವು ಎಡರು ತೊಡರುಗಳನ್ನು ದಾಟಿ ಈ ವರ್ಷ ಅ. 11ರಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಲೋಕಾರ್ಪಣೆಗೊಳಿಸಿದ್ದರು. ಆರಂಭದ ಒಂದೆರಡು ದಿನಗಳಲ್ಲಿ ಆಹಾರ ಬೇಗನೆ ಮುಗಿದಿತ್ತು. ಬಳಿಕದ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಸೋಮವಾರ ಮಧ್ಯಾಹ್ನದ ವೇಳೆ ಏಕಾಏಕಿ ಬೀಗ ಹಾಕಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದರಿಂದ ತಾಲೂಕಿನ ಜನತೆಯಲ್ಲಿ ನಾನಾ ಅನುಮಾನಗಳು ಮೂಡಿದ್ದವು.
ಬೆಂಗಳೂರು ಮೂಲದವರು ಈ ಕ್ಯಾಂಟೀನನ್ನು ಗುತ್ತಿಗೆಗೆ ವಹಿಸಿಕೊಂಡಿದ್ದಾರೆ.ಇಲ್ಲಿ ಸುಮಾರು ನಾಲ್ಕು ಜನ ಸಿಬ್ಬಂದಿಗಳು ಇದ್ದಾರೆ. ಆದರೆ ಕ್ಯಾಂಟೀನ್ ತೆರೆದ ಬಳಿಕ ಇವರಿಗೆ ವೇತನ ಸಿಗದೆ ಬೀಗ ಹಾಕಲು ಕಾರಣ ಎಂದು ಹೇಳಲಾಗಿದೆ. ನಿರ್ವಹಣೆ ಅನುದಾನ ಬಿಡುಗಡೆ ಯಾಗದೆ ವೇತನ ಪಾವತಿಗೆ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.
ತಾಂತ್ರಿಕ ದೋಷ:
ಗುತ್ತಿಗೆದಾರರಿಗೆ ಸಂಬಂಧಪಟ್ಟ ಹಣ ಪಾವತಿಸಲು ಅವರು ನೀಡಿರುವ ದಾಖಲೆಗಳಲ್ಲಿ ಇರುವ ತಾಂತ್ರಿಕ ದೋಷ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಗುತ್ತಿಗೆದಾರರಿಗೆ ಅನೇಕ ಬಾರಿ ತಿಳಿಸಲಾಗಿದ್ದರೂ ಅವರು ತಾಂತ್ರಿಕ ದೋಷ ಸರಿಪಡಿಸದೆ ಇರುವುದು ಅನುದಾನ ಬಿಡುಗಡೆಗೆ ತೊಡಕಾಗಿದೆ. ಈ ಬಗ್ಗೆ ಬುಧವಾರ ಸಂಬಂಧಪಟ್ಟ ಅಧಿಕಾರಿಗಳು ಮಾತುಕತೆ ನಡೆಸಿದ ಬಳಿಕ ಇಂದಿರಾ ಕ್ಯಾಂಟೀನ್ ಮತ್ತೆ ಸಾರ್ವಜನಿಕರ ಸೇವೆಗೆ ತೆರೆದುಕೊಂಡಿದೆ. ಇದೇ ಗುತ್ತಿಗೆದಾರರು
ಪುತ್ತೂರು, ಸುಳ್ಯ, ಬಂಟ್ವಾಳ,ಮೂಡಬಿದಿರೆ ಮೂಲ್ಕಿ ಕಿನ್ನಿಗೋಳಿ ಮತ್ತು ಬೆಳ್ತಂಗಡಿ ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಯಾವುದೇ ಕ್ಯಾಂಟೀನ್‌ಗೂ ಹಣ ಪಾವತಿ ಆಗಿಲ್ಲ ಎಂದು ಹೇಳಲಾಗಿದೆ. ಉಳಿದ ಕಡೆಗಳಲ್ಲಿ ಕ್ಯಾಂಟಿನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಬೆಳ್ತಂಗಡಿಯಲ್ಲಿ ಮಾತ್ರ ಬೀಗ ಹಾಕಲಾಗಿತ್ತು.
ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ದಾಖಲೆಗಳಲ್ಲಿ ತಾಂತ್ರಿಕ ದೋಷಗಳಿದ್ದು,ಅದನ್ನು ಸರಿಪಡಿಸಲು ಅನೇಕ ಬಾರಿ ಸೂಚಿಸಲಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿದ ತಕ್ಷಣ ಅವರಿಗೆ ಬಾಕಿಯಾದ ಎರಡು ತಿಂಗಳ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆವಾಗಿದ್ದು, ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಂಬಂಧ ಪಟ್ಟ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.