ಕೌಕ್ರಾಡಿ ವೃದ್ಧದಂಪತಿಗಳ ಬದುಕಿಗಾಗಿ ಡಿ.22 ರಂದು ಎಸಿ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ
ಪುತ್ತೂರು: ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಾಪಿನಬಾಗಿಲು ನಿವಾಸಿ ರಾಧಮ್ಮ ಹಾಗೂ ಮುತ್ತು ಸ್ವಾಮಿ ದಂಪತಿಯ ಮನೆಯನ್ನು ಏಕಾಏಕಿ ಕಡಬ ತಹಶೀಲ್ದಾರ್ ಮತ್ತು ಅಧಿಕಾರಿಗಳು ನೆಲಸಮ ಮಾಡಿ ಒಂದು ವರ್ಷ ಕಳೆದು ಹೋಗಿದೆ. ಇನ್ನೂ ಕೂಡಾ ಆ ವೃದ್ಧ ದಂಪತಿಗೆ ನ್ಯಾಯ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮತ್ತು ನೊಂದ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸುವಂತೆ ಆಗ್ರಹಿಸಿ ಡಿ.22ರಂದು ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ನೀತಿ ತಂಡದ ಜಯಂತ್ ಟಿ. ತಿಳಿಸಿದ್ದಾರೆ.
ಸಂತ್ರಸ್ತರ ಜತೆ ಬುಧವಾರ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೌಕ್ರಾಡಿ ಗ್ರಾಮದ ಸರ್ವೆ ನಂಬರ್ 123/1ರಲ್ಲಿ ಮಲೆಕುಡಿಯ ಜನಾಂಗದವರು ಸುಮಾರು 200 ವರ್ಷಗಳಿಂದ ವಾಸವಾಗಿದ್ದಾರೆ. ಅದೇ ಜಾಗದಲ್ಲಿ ೨೯ ಸೆಂಟ್ಸ್ ಸ್ಥಳದಲ್ಲಿ ರಾಧಾಮ್ಮ ಎಂಬವರು ತಮ್ಮ ಗುಡಿಸಲು ಮನೆಯಲ್ಲಿ ಜೀವನ ನಡೆಸುತ್ತಿದ್ದು, 2021ರಲ್ಲಿ ಅದೇ ಸ್ಥಳದಲ್ಲಿ ಸುಮಾರು 10 ಲಕ್ಷ ಖರ್ಚು ಮಾಡಿ ಮನೆಯನ್ನು ನಿರ್ಮಿಸಿದ್ದರು. ಆ ಕುಟುಂಬಕ್ಕೆ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಗ್ಯಾಸ್, ವಿದ್ಯುತ್ ಸಂಪರ್ಕ ಸೇರಿದಂತೆ ಸರಕಾರದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಾನೂನು ಬದ್ಧವಾಗಿ ಪಡೆದಿತ್ತು. ಜಾಗಕ್ಕೆ 94ಸಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಈ ಕುಟುಂಬ 2015 ಹಿಂದಕ್ಕೆ ವಾಸವಾಗಿರುವುದಿಲ್ಲ ಎಂದು ಹಿಂಬರಹ ನೀಡಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಅಕ್ರಮ-ಸಕ್ರಮದಲ್ಲೂ ಸಲ್ಲಿಸಿದ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ತಹಶೀಲ್ದಾರ್ ಮತ್ತು ಅಧಿಕಾರಿಗಳು 2024ರ ನ.13ರಂದು ಏಕಪಕ್ಷೀಯವಾಗಿ ಮನೆ ನೆಲಸಮಗೊಳಿಸಿದ್ದಾರೆ. ಪಕ್ಕದಲ್ಲೇ ಇರುವ 4 ಮನೆಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಆದರೆ ಇವರ ಮನೆಯನ್ನು ಮಾತ್ರ ಕೆಡವಲಾಗಿದೆ. ನಡೆದಿರುವ ಅನ್ಯಾಯದ ವಿರುದ್ಧ ನ್ಯಾಯ ಕೊಡಿಸುವಂತೆ ಪುತ್ತೂರು ಸಹಾಯಕ ಆಯುಕ್ತರಿಗೆ 2024 ರ ನ.19 ಹಾಗೂ 2025 ರ ನ.20 ರಂದು ಎರಡು ಬಾರಿ ಮನವಿ ಮನವಿ ಸಲ್ಲಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲಾ ಇಲಾಖೆಗಳಿಗೆ ದೂರು ನೀಡಿದರೂ ಬಡಕುಟುಂಬಕ್ಕೆ ನ್ಯಾಯ ಸಿಗಲಿಲ್ಲ.
ಬೇರೆ ತಾಲೂಕು ವ್ಯಾಪ್ತಿಯಲ್ಲಿರುವ ಮಗಳ ಹೆಸರಿನಲ್ಲಿ ಪಿ.ಎಲ್. ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮಗಳ ಮೇಲಿನ ದ್ವೇಶದಿಂದ ಕೆಲವರ ಹಿತಾಸಕ್ತಿಗೆ ಬಳಿಯಾಗಿ ಅಧಿಕಾರಿಗಳ ಮೂಲಕ ಈ ಕೃತ್ಯ ಎಸಗಲಾಗಿದ್ದು, ಈ ನಿಟ್ಟಿನಲ್ಲಿ ನಾವು ಡಿ.22 ರಂದು ಬೆಳಗ್ಗೆ 11 ಗಂಟೆಗೆ ಪುತ್ತೂರು ಎಸಿ ಕಚೇರಿ ಇರುವ ಕಂದಾಯ ಇಲಾಖೆಯ ಆವರಣದಲ್ಲಿ ಪ್ರತಿಭಟನೆ ಮಾಡಲಿದ್ದೇವೆ. ಪ್ರತಿಭಟನೆಯಲ್ಲಿ ವೃದ್ಧ ದಂಪತಿ, ಅವರ ಮಕ್ಕಳು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ನೊಂದ ಕುಟುಂಬದ ಮುತ್ತುಸ್ವಾಮಿ ಅವರು ಮಾತನಾಡಿ, ಮನೆ ಧ್ವಂಸ ಮಾಡಿದ ಕುರಿತು ನಾವು ಪೊಲೀಸರಿಗೆ ದೂರು ನೀಡಿದ್ದೆವು. ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಆದರೆ ಕರ್ತವ್ಯಕ್ಕೆ ಅಡ್ಡಿ ಎಂದು ನನ್ನ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ರಾಧಮ್ಮ ಮತ್ತು ಮುತ್ತುಸ್ವಾಮಿ ಉಪಸ್ಥಿತರಿದ್ದರು.