ರೋಟರಿಕ್ಲಬ್ ವತಿಯಿಂದ ಬುಹುಮುಖಿ ಸಮಾಜ ಸೇವೆ: ರಾಮಕೃಷ್ಣ ಪಿ.ಕೆ.
ಅವರು ಗುರುವಾರ ಉಜಿರೆಯಲ್ಲಿ ರೋಟರಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ರೋಟರಿ ಸೇವಾಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರಿನಲ್ಲಿ ಲೇಡಿಗೋಶನ್ ಅಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಹಾಲು ಕುಡಿಸುವುದಕ್ಕಾಗಿ ಒಂದು ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಉಪಕರಣ ಅಳವಡಿಸಿದ್ದು, ಇದರಿಂದಾಗಿ 436 ನವಜಾತ ಶಿಶುಗಳ ರಕ್ಷಣೆ ಸಾಧ್ಯವಾಗಿದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಅಮೃತಕೃಪಾ ಆಸ್ಪತ್ರೆಯಲ್ಲಿ ಅಲ್ಲಿನ ರೋಟರಿಕ್ಲಬ್ ವತಿಯಿಂದ 47 ಲಕ್ಷ ರೂ. ವೆಚ್ಚದಲ್ಲಿ ಲೆಪ್ರೊಸ್ಕೋಪಿಕ್ ಘಟಕ ಪ್ರಾರಂಭಿಸಲಾಗಿದೆ.
ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ರೂ. 1,500 ರಿಯಾಯಿತಿ ದರದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರೋಟರಿಕ್ಲಬ್ ವತಿಯಿಂದ ಅಲ್ಲಲ್ಲಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದು, ಪುರುಷರು ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿದರೂ, ಹಿಮೊಗ್ಲೋಬಿನ್ ಕೊರತೆಯಿಂದಾಗಿ ಮಹಿಳೆಯರು ರಕ್ತದಾನ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಈ ಬಗ್ಯೆ ಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಉಜಿರೆಯ ಪ್ರೊ. ಪ್ರಕಾಶ ಪ್ರಭು ಮತ್ತು ಕಾರ್ಯದರ್ಶಿ ಡಾ. ಎಂ.ಎಂ. ದಯಾಕರ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.
ಬೆಳ್ತಂಗಡಿ ರೋಟರಿಕ್ಲಬ್ ಆಶ್ರಯದಲ್ಲಿ ಗುರುವಾರ ಬೆಳ್ತಂಗಡಿಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಕಳೆಂಜ ಗ್ರಾಮದ ನಂದಗೋಕುಲದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಕಟ್ಟಡಕ್ಕೆ ಶಿಲಾನ್ಯಾಸ, ಉಜಿರೆ-ಬೆಳಾಲು ಮಾರ್ಗದಲ್ಲಿ ಪರಂಗಜೆ ಎಂಬಲ್ಲಿ ಬಸ್ ತಂಗುದಾಣ ಉದ್ಘಾಟನೆ ನಡೆಸಲಾಯಿತು.