ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಲು ಶಿಕ್ಷಣಾಧಿಕಾರಿಗೆ ಸ್ಪೀಕರ್ ಖಾದರ್ ಸೂಚನೆ
ಅವರು ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ನಡೆದ ಉಳ್ಳಾಲ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ತೇಜನ ನೀಡಬೇಕು. ಈ ಬಾರಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಸಾಧಿಸುವ ದೃಷ್ಟಿಯಿಂದ ಶಿಕ್ಷಕರು, ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿರಬೇಕು. ಇದಕ್ಕಾಗಿ ಈಗಾಗಲೇ ಕ್ರಮ ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಅವರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ತರಗತಿ ನಡೆಸಿ ಕಲಿಸುವ ಕೆಲಸ ಶಾಲೆಗಳಲ್ಲಿ ನಡೆಯುತ್ತಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಕರು ಈ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶಿಕ್ಷಣ ಹೇಗೆ ಸಾಗುತ್ತಿದೆ ಎಂಬ ಬಗ್ಗೆ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದರು.
ಕಲ್ಲು ಮತ್ತು ಮರಳು ಸಮಸ್ಯೆ ಇತ್ಯರ್ಥ ಆಗದ ಕಾರಣ ಜನರು ತೊಂದರೆಗೊಳಗಾಗಿದ್ದಾರೆ. ಕೇರಳದಲ್ಲಿ 25 ರೂ.ವಿಗೆ ಕಲ್ಲು ಸಿಗುತ್ತದೆ. ಅದು ನಮ್ಮೂರಿಗೆ ಬರುವಾಗ 45 ರೂ. ಆಗುತ್ತದೆ. ಮರಳಿಗೆ 21 ಸಾವಿರ ಆಗಿದೆ. ಈ ಸಮಸ್ಯೆ ಇತ್ಯರ್ಥ ಮಾಡುವಂತೆ ಪಂಚಾಯತ್ ಸದಸ್ಯರೊಬ್ಬರು ಮಾಡಿದ ವಿನಂತಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್ ಅವರು, ಮರಳು ದರ 14,000 ರೂ.ವಿಗೆ ಇಳಿಸುತ್ತೇನೆ ಎಂದರು.
ಪರವಾನಿಗೆ ಇದ್ದ ವ್ಯಕ್ತಿ ಒಂದು ಲೋಡ್ ಮರಳಿಗೆ 8,500 ರೂ. ಹಣ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ಲಾರಿ ಬಾಡಿಗೆ, ಜಿಎಸ್‌ಟಿ ಸೇರಿಸಿದರೆ ಒಂದು ಲೋಡ್ ಮರಳು ದರ 10 ಸಾವಿರ ರೂ. ದಾಟುತ್ತದೆ. ಮರಳಿಗೆ ನಿಗದಿತ ದರ ಮಾಡಿ ತೀರ್ಮಾನ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೇ.40 ರೋಗಿಗಳಿದ್ದು, ವೈದ್ಯರ ಕೊರತೆಯಿದೆ. ಅಂಬ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಟೆಕಲ್ ಆರೋಗ್ಯ ಕೇಂದ್ರದ ವೈದ್ಯರು ಜವಾಬ್ದಾರಿ ತೆಗೆದು ಕೊಂಡು ಕೆಲಸ ಮಾಡುತ್ತಿದ್ದಾರೆ. ನಾಟೆಕಲ್, ಕೋಟೆಕಾರ್‌ನಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೇ.80 ರಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ವರ್ಷ 87 ಸಾವಿರ ಒಪಿಡಿ ರೋಗಿಗಳು ಚಿಕಿತ್ಸೆ ಪಡೆದಿದ್ದು, ಈ ಬಾರಿ 82 ಸಾವಿರ ಒಪಿಡಿ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಸುಜಯ್ ವರದಿ ವಾಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ. ಖಾದರ್, ರೋಗಿಗಳ ಆರೈಕೆ ಮುಖ್ಯ ಆಗಿದ್ದು, ಈ ಕೆಲಸ ಆಗಬೇಕು. ವೈದ್ಯರ ಕೊರತೆ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕು. ನರಿಂಗಾನ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ನರಿಂಗಾನ ಗ್ರಾ.ಪಂ. ಹೆಸರಲ್ಲಿ ಆರ್‌ಟಿಸಿ ಮಾಡಿಕೊಡಬೇಕು. ನರಿಂಗಾನ ಗ್ರಾ.ಪಂ. ಅಡಿಯಲ್ಲಿ ಆರ್‌ಟಿಸಿ ನೀಡಿ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಸುಜಯ್‌ಗೆ ಸೂಚನೆ ನೀಡಿದರು.
ಸೋಮೇಶ್ವರ ಪುರಸಭೆ ಪೌರಾಯುಕ್ತ ಮತ್ತಡಿ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ 169 ಮನೆಗಳಿಗೆ ಹಾನಿ ಆಗಿದೆ. ಈ ಪೈಕಿ 151 ಕುಟುಂಬಗಳಿಗೆ ತಲಾ ಐದು ಸಾವಿರ, ಎರಡು ಮನೆಗಳಿಗೆ ತಲಾ 30 ಸಾವಿರ, ನಾಲ್ಕು ಮನೆಗಳಿಗೆ ತಲಾ 50 ಸಾವಿರ ಪರಿಹಾರ ನೀಡಲಾಗಿದೆ 1.21 ಕೋಟಿ ತೆರಿಗೆ ಸಂಗ್ರಹ ಆಗಿದೆ. ಪಿಲಾರ್ ನಲ್ಲಿ ನಿರ್ಮಿಸಿದ ಕಟ್ಟಡ ಖಾಲಿ ಇದೆ ಎಂದು ಸಭೆಯಲ್ಲಿ ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ತಾಲೂಕು ಅಧ್ಯಕ್ಷ ರಫೀಕ್, ಜಿಲ್ಲಾ ಉಪಾಧ್ಯಕ್ಷ ಸುರೇಖಾ ಚಂದ್ರಹಾಸ್, ಉಳ್ಳಾಲ ತಾಲೂಕು ಆಡಳಿತ ಅಧಿಕಾರಿ ಪ್ರದೀಪ್ ಡಿ ಸೋಜ, ತಾ.ಪಂ. ಇ.ಒ.ಗುರುದತ್ ಎಮ್.ಎನ್., ಮಂಗಳೂರು ಉಪ ವಿಭಾಗ ಸಹಾಯಕ ಆಯುಕ್ತ ಮೀನಾಕ್ಷಿ ಆಚಾರ್ಯ, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಗಫೂರ್, ಎಮ್‌ಎಲ್‌ಸಿ ಮಂಜುನಾಥ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.