ಹಿಂದುತ್ವದ ಘೋಷಣೆಯಿಂದ ಭೋರ್ಗರೆದ ಅರ್ಕುಳ ಹಿಂದೂ ಸಂಗಮ ಸಮಾವೇಶ
ಸಂಜೆ 3.30ರಿಂದ ಅರ್ಕುಳ ನಾರಾಯಣಗುರು ಮಂದಿರದಿಂದ ಶ್ರೀ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನದ ಚೆಂಡಿನ ಗದ್ದೆಯವರೆಗೆ ಸಹಸ್ರಾರು ಹಿಂದೂಗಳ ಭಾಗವಹಿಸುವಿಕೆಯಿಂದ ವೈಭವಯುತ ಬೃಹತ್ ಶೋಭಾಯಾತ್ರೆ ನಡೆಯಿತು. ಕುಣಿತ ಭಜನೆ, ಚೆಂಡೆ ವಾದನ, ಘೋಷವಾಕ್ಯಗಳು ಹಾಗೂ ಧಾರ್ಮಿಕ-ಸಾಂಸ್ಕೃತಿಕ ವೈಭವದಿಂದ ಶೋಭಾಯಾತ್ರೆ ಜನಮನ ಸೆಳೆಯಿತು.
ಶೋಭಾಯಾತ್ರೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅರ್ಕುಳಬೀಡಿನ ಧರ್ಮಾಧಿಕಾರಿ ವಜ್ರನಾಭ ಶೆಟ್ಟಿ ಅವರು ಆಶೀರ್ವಚನ ನೀಡಿದರು. ದಕ್ಷಿಣ ಪ್ರಾಂತ ಸಹಕಾರ್ಯವಾಹಕ ಪಿ.ಎಸ್. ಪ್ರಕಾಶ್ ಅವರು ಹಿಂದೂ ಸಮಾಜದ ಏಕತೆ, ಸಂಸ್ಕೃತಿ ಹಾಗೂ ಸಂಘಟಿತ ಶಕ್ತಿಯ ಮಹತ್ವವನ್ನು ವಿವರಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಕಣ್ಣೂರು ನಿರ್ವಹಣೆಯ ಅಧ್ಯಕ್ಷ ವಿವೇಕ್ ಕೋಟ್ಯಾನ್ ಕೊಡಕ್ಕಲ್, ಸದಾನಂದ ಆಳ್ವ, ಉಮಾ ಸೋಮಯಾಜಿ, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮೂಲಕ ತಮ್ಮ ಜೀವನವನ್ನೇ ಸಮಾಜ ಸೇವೆಗೆ ಸಮರ್ಪಿಸಿದ ಹಿರಿಯರಾದ ಮಾಧವ ಟೈಲರ್ ತುಪ್ಪೆಕಲ್ಲು, ಸೇಸಪ್ಪ ಕರ್ಕೇರಾ ಮಂಟಮೆ, ಚಂದಪ್ಪ ಕೊಟ್ಟಾರಿ ವಳಚ್ಚಿಲ್ ಅವರನ್ನು ಸನ್ಮಾನಿಸಲಾಯಿತು.
ಅಶೋಕ್ ಕೊಟ್ಟಾರಿ ಸ್ವಾಗತಿಸಿದರು. ದಿನಕರ ಕರ್ಕೇರಾ ಮಂಟಮೆ ವಂದಿಸಿ, ನಾಗರಾಜ್ ಶೆಟ್ಟಿ ತುಪ್ಪೆಕಲ್ಲು ಕಾರ್ಯಕ್ರಮವನ್ನು ನಿರೂಪಿಸಿದರು.