ಜ.11 ರಂದು ಬುಡೋಳಿ ನೇತಾಜಿ ಅನುದಾನಿತ ಕಿ.ಪ್ರಾ. ಶಾಲೆಯಲ್ಲಿ ಬಾಲಗೋಕುಲ ಜ್ಞಾನಮಂದಿರದ ಲೋಕಾರ್ಪಣೆ
ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದ ಬುಡೋಳಿ ನೇತಾಜಿ ಅನುದಾನಿತ ಕಿ.ಪ್ರಾ. ಶಾಲೆ, ಜಾನಕಿ ಚಾರಿಟೇಬಲ್ ಟ್ರಸ್ಟ್ (ರಿ), ಕಾಟಿಪಳ್ಳ, ಹಳೇ ವಿದ್ಯಾರ್ಥಿ ಸಂಘ ಹಾಗೂ ಊರ-ಪರವೂರು ಸಹಕಾರದಲ್ಲಿ ಸುಮಾರು 35 ಲ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಾಲಗೋಕುಲ ಜ್ಞಾನಮಂದಿರದ ಲೋಕಾರ್ಪಣೆ ಮತ್ತು ಶಾಲಾ ವಾರ್ಷಿಕೋತ್ಸವವು ಜ.11 ರಂದು ನಡೆಯಲಿದೆ ಎಂದು ಶಾಲಾ ಸಂಚಾಲಕ ಧರ್ಮೇಂದ್ರ ಗಣೇಶಪುರ ಹೇಳಿದರು.
ಶನಿವಾರ ಬಂಟ್ಚಾಳ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇ.ಮೂ. ಅನಂತಪದ್ಮನಾಭ ಅಸ್ರಣ್ಣ ಅವರು ಜ್ಞಾನಮಂದಿರದ ಲೋಕಾರ್ಪಣೆಗೈಯಲಿದ್ದಾರೆ. ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ರಾಜ್ಯ ಧಾರ್ಮಿಕ ಪರಿಷತ್ ಸದಸದಯ ರವಿಶಂಕರ ಶೆಟ್ಟಿ ಬಡಾಜೆಗುತ್ತು ಸಹಿತ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭ ಮಂಗಳೂರು ಬಿಎನ್‌ಐ ಸಂಸ್ಥೆಯಿಂದ ಸುನಿಲ್ ದತ್ತ ಪೈ ಅವರು 2 ಲ.ರೂ. ಮೌಲ್ಯದ ಆಟದ ಸಾಮಾಗ್ರಿಗಳನ್ನು ಹಸ್ತಾಂತರಿಸಲಿದ್ದಾರೆ.
ಮುಚ್ಚುವ ಹಂತದಲ್ಲಿದ್ದ ಈ ಶಾಲೆಯನ್ನು ಶ್ರೀಪತಿ ಭಟ್ ಪುಂಚೋಡಿ ಅವರಿಂದ ಕಾಟಿಪಳ್ಳ ಜಾನಕಿ ಚಾರಿಟೇಬಲ್ ಟ್ರಸ್ಟ್ ದತ್ತು ಪಡೆದುಕೊಂಡ ಬಳಿಕ ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಪ್ರಸ್ರುತ 50ಕ್ಕು ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ. ಮಾಡುತ್ತಿದ್ದು, ಇಲ್ಲಿ ಸಕಲ ಸೌಲಭ್ಯದೊಂದಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಎಂಆರ್‌ಪಿಎಲ್ ಸಂಸ್ಥೆ ಒದಗಿಸಿದ ಒಂದು ಕೋಟಿ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗಿದ್ದು, 2022ರ ಆಕ್ಟೋಬರ್‌ನಲ್ಲಿ ಈ ಕಟ್ಟಡದ ಲೋಕಾರ್ಪಣೆಗೊಳಿಸಲಾಗಿದೆ.
ಶ್ರೀ.ಕ್ಷೇ.ಧ.ಗ್ರಾ.ಯೋ. ವತಿಯಿಂದ ಪೀಠೋಪಕರಣ, ಶಿಕ್ಷಕಿಯೋರ್ವರನ್ನು ಒದಗಿಸಿದೆ. ಶಾಲೆಯಲ್ಲಿ ಯೋಗ ಶಿಕ್ಷಣ ಸಹಿತ ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ನಡೆಯುತ್ತಿದೆ. ಮುಂದಿನ ಶೈಕ್ಷಣಿಕ ಸಾಲಿಗೆ ಇಲ್ಲಿ ಆಂಗ್ಲಮಾಧ್ಯಮ ಶಿಕ್ಷಣವನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದೆ. ನೂತನ ಬಾಲಗೋಕುಲ ಕಟ್ಟಡವನ್ನು ಗೋಕುಲ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂದರು.
ಅಂದು ಶಾಲಾ ವಾರ್ಷಿಕೋತ್ಸವವು ಜರಗಲಿದ್ದು, ಈ ಸಂದರ್ಭ ನಿವೃತ್ತ ಮುಖ್ಯೋಪಾಧ್ತಾಯರು,ಸಾಧಕರು ಹಾಗೂ ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ಧರ್ಮೇಂದ್ರ ಗಣೇಶ್‌ಪುರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಿಲ್ವೆಸ್ಟರ್ ಫೆರ್ನಾಂಡಿಸ್, ಕಾರ್ಯದರ್ಶಿ ದೇವಪ್ಪ ಕುಲಾಲ್, ಕೋಶಾಧಿಕಾರಿ ಕೇಶವ ಪೂಜಾರಿ, ಟ್ರಸ್ಟಿ ಜಯಕುಂದರ್, ಮುಖ್ಯೋಪಾಧ್ಯಾಯ ದೊಡ್ಡಪ್ಪ ಹೆಚ್. ಉಪಸ್ಥಿತರಿದ್ದರು.