ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ: ಸವಾರ ದಾರುಣ ಮೃತ್ಯು
ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಪಾಡಿ ನಿವಾಸಿ ಪದ್ಮನಾಭ ದೇವಾಡಿಗ (45) ಮೃತಪಟ್ಟ ದುರ್ದೈವಿ.
ಇವರು ಉಪ್ಪಿನಂಗಡಿಯಲ್ಲಿ ಹೋಟೆಲ್‌ವೊಂದರಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದು, ಮೂರು ದಿನಗಳಿಗೊಮ್ಮೆ ತನ್ನ ಮನೆಗೆ ಬರುತ್ತಿದ್ದರೆನ್ನಲಾಗಿದೆ.
ಶುಕ್ರವಾರ ರಾತ್ರಿ ಹೋಟೆಲ್‌ನಲ್ಲಿ ಕೆಲಸ ಮುಗಿಸಿ ಸುಮಾರು 11.30 ರ ವೇಳೆಗೆ ತನ್ನ ದ್ವಿಚಕ್ರವಾಹನದಲ್ಲಿ ಕಾವಳಮೂಡೂರಿನಲ್ಲಿರುವ ಮನೆಗೆ ಬರುತ್ತಿದ್ದ ವೇಳೆ ಪುಂಜಾಲಕಟ್ಟೆ ಹಾಗೂ ಮಡಂತ್ಯಾರಿನ ಮಧ್ಯ ಭಾಗದಲ್ಲಿ ಮಂಗಳೂರು ಏರ್ ಪೋರ್ಟ್‌ನಿಂದ ಅತೀ ವೇಗ ಹಾಗೂ ಅಜಾಗರುಕತೆಯಿಂದ ಧಾವಿಸಿ ಬಂದ ಇಗ್ನಿಸ್ ಕಾರು ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಕಾರು ಢಿಕ್ಕಿಯಾದ ರಭಸಕ್ಕೆ ಪದ್ಮನಾಭ ಅವರು ಸ್ಕೂಟರ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಸ್ವರೂಪದ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಕೊನೆಯುಸಿರೆಳೆದೊರುವುದನ್ನು ದೃಢಪಡಿಸಿದರು.
ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಪತ್ನಿ ಹಾಗೂ ತಲಾ ಒರ್ವ ಪುತ್ರ ಮತ್ತು ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.