ಸರಕಾರಿ ಕಚೇರಿಗಳಲ್ಲಿ ಚಲನವಲನ ನೋಂದಣಿ ಕಡ್ಡಾಯ: ಮಲಿನ ನೀರು ಬಿಡುತ್ತಿರುವ ಹೋಟೇಲ್‌ಗಳ ವಿರುದ್ಧ ಕ್ರಮ
ಪಟ್ಟಣ ಪಂಚಾಯತ್, ಇಲಾಖಾ ಮಟ್ಟದ ಜನಸ್ಪಂದನ ಸಭೆ
ಸ್ಥಳೀಯರೊಬ್ಬರು ಈ ಬಗ್ಗೆ ಪ್ರಶ್ನಿಸಿದಾಗ ಇದಕ್ಕೆ ಶಾಸಕ ಹರೀಶ್ ಪೂಂಜ ಅವರು ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ, ಅಧಿಕಾರಿಗಳ ಚಲನವಲನ ಪುಸ್ತಕ ನಿರ್ವಹಣೆ ಮಾಡಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ಯಾವ ಸಂದರ್ಭದಲ್ಲಿ ಹೋದರೂ ವೈದ್ಯರು ಇರುವುದಿಲ್ಲ ಎಂಬ ವಿಚಾರವೂ ಈ ವೇಳೆ ಪ್ರಸ್ತಾಪವಾಯಿತ್ತಲ್ಲದೆ, ವೈದ್ಯರು ಆಸ್ಪತ್ರೆಗೆ ಬಂದು ಥಂಬ್ ಹಾಕಿ ಖಾಸಗಿ ಸೇವೆಗೆ ಹೋಗುತ್ತಾರೆ ಜನರಿಗೆ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂತು. ಈ ಬಗ್ಗೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್ ಪ್ರತಿದಿನ ಆಸ್ಪತ್ರೆಯಲ್ಲಿ ಕರ್ತವ್ಯ ವೈದ್ಯರು ಇರುತ್ತಾರೆ ಎಂದು ಸಮಜಾಯಿಷಿ ಕೊಟ್ಟರು ಈ ಬಗ್ಗೆ ಪರಿಶೀಲನೆ ನಡೆಸಿ ಜಿಲ್ಲಾ ಅರೋಗ್ಯ ಅಧಿಕಾರಿಯವರ ಗಮನಕ್ಕೆ ತರುವುದಾಗಿ ಶಾಸಕರು ತಿಳಿಸಿದರು.
ಅಲ್ಲಾಟಬೈಲು ಪ್ರದೇಶದ 10-12 ಬಡ ಕುಟುಂಬಗಳಿಗೆ ರಸ್ತೆ ಇಲ್ಲ ನಮಗೆ ರಸ್ತೆ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ವಿನಂತಿಸಿಕೊಂಡರು. ಈ ಬಗ್ಗೆ ಕೂಡಲೇ ಪಟ್ಟಣ ಪಂಚಾಯತ್ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆಗೆ ಶಾಸಕರು ಸೂಚನೆ ನೀಡಿದರು.
ಪ.ಪಂ. ವ್ಯಾಪ್ತಿಯಲ್ಲಿ ಜಂಗಲ್ ಕಟ್ಟಿಂಗ್ ಮಾಡಿಲ್ಲ ಕೂಡಲೇ ಮಾಡಿಸಿ ಎಂದು ಪ.ಪಂ. ಮಾಜಿ ಅಧ್ಯಕ್ಷ ಜಯಾನಂದ ಗೌಡ ಮನವಿ ಮಾಡಿಕೊಂಡರು. ಈ ಬಗ್ಗೆ ಮುಖ್ಯಾಧಿಕಾರಿಯವರು ಉತ್ತರಿಸುತ್ತಾ ಪೌರ ಕಾರ್ಮಿಕರಿಂದ ಜಂಗಲ್ ಕಟ್ಟಿಂಗ್ ಮಾಡಿಸುತ್ತಿದ್ದೇವೆ ಎಂದು ತಿಳಿಸಿದ್ದು ಇದಕ್ಕೆ ಆಕ್ಷೇಪಿಸಿದ ದಲಿತ ಮುಖಂಡ ಬಿ.ಕೆ. ವಸಂತ್ ನೀವು ಪೌರ ಕಾರ್ಮಿಕರನ್ನು ಜಂಗಲ್ ಕಟ್ಟಿಂಗ್ ಕೆಲಸಕ್ಕೆ ಉಪಯೋಗಿಸುವುದು ಸರಿಯಲ್ಲ, ಪೌರ ಕಾರ್ಮಿಕರು ಸ್ವಚ್ಛತೆ ಕೆಲಸವನ್ನು ಮಾತ್ರ ಮಾಡಲಿ ಎಂದು ಒತ್ತಾಯಿಸಿದರು.
ಈ ವೇಳೆ ಶಾಸಕ ಹರೀಶ್ ಪೂಂಜ ಜಂಗಲ್ ಕಟ್ಟಿಂಗ್ ಗುತ್ತಿಗೆದಾರರಿಂದಲೇ ಮಾಡಿಸಿ ಎಂದು ಮುಖ್ಯಾಧಿಕಾರಿಯವರಿಗೆ ಸೂಚಿಸಿದರು. ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ತಕ್ಷಣ ದುರಸ್ತಿಗೊಳಿಸುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು. ನಗರದ ತ್ಯಾಜ್ಯ ನೀರು ಸೋಮವತಿ ನದಿಗೆ ಹರಿದು ಬರುತ್ತಿದೆ. ಇದರಿಂದ ನದಿ ನೀರು ಹಾಳಾಗಿ ವಾಸನೆ ಬರುತ್ತಿದೆ. ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರೊಬ್ಬರು ಶಾಸಕರ ಗಮನಕ್ಕೆ ತಂದಾಗ ತಕ್ಷಣ ಕ್ರಮ ಕೈಗೊಳ್ಳಿ ಎಂದಾಗ ಸ್ಥಳೀಯ ಕೆಲವೊಂದು ಹೊಟೇಲ್‌ನವರು ತ್ಯಾಜ್ಯ ನೀರು ಬಿಡುತಿದ್ದು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಬಗ್ಗೆ ಅಧಿಕಾರಿಗಳು ತಿಳಿಸಿದರು.
ಅದಲ್ಲದೇ ರಸ್ತೆ, ಚರಂಡಿ, ಚಿರತೆ, ಬೀದಿ ನಾಯಿಗಳ ಹಾವಳಿ, ಸೇರಿದಂತೆ ಇನ್ನಿತರ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಪ.ಪಂ. ಆಡಳಿತಾಧಿಕಾರಿ ಪೃಥ್ವಿ ಸಾನಿಕಂ, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಪ.ಪಂ ಮುಖ್ಯಾಧಿಕಾರಿ ರಾಜೇಶ್ ಕೆ., ಮುಗುಳಿ ನಾರಾಯಣ ರಾವ್, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.