ರಾಜ್ಯಪಾಲರು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಬೇಕೆ ಹೊರತು ಒಂದು ಪಕ್ಷದ ಏಜೆಂಟರಂತೆ ವರ್ತಿಸಬಾರದು: ಶುಭದರಾವ್
ಕಾರ್ಕಳ: ಸದನದಲ್ಲಿ ಸಂಪ್ರದಾಯದಂತೆ ಸರ್ಕಾರ ನೀಡಿದ ಭಾಷಣವನ್ನು ಮಾಡದೇ ತಿರಸ್ಕರಿಸಿ ಸರ್ಕಾರದ ನಡೆಯನ್ನು ವಿರೋಧಿಸಿ ಸಂವಿಧಾನ ನೀಡಿದ ಕರ್ತವ್ಯಗಳನ್ನು ಉಲ್ಲಂಘಿಸಿದ ರಾಜ್ಯಪಾಲರ ನಡೆಯುವ ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕವಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದರು.
ದೇಶದ ನಾಗರಿಕರಿಗೆ ಉದ್ಯೋಗ ನೀಡಲು ಜಾರಿಗೊಳಿಸಿದ ಉದ್ಯೋಗ ಖಾತರಿ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮರುನಾಮಕರಣ ನೆಪದಲ್ಲಿ ಯೋಜನೆಯ ಮೂಲ ಆಶಯಗಳಿಗೆ ತಿಲಾಂಜಲಿ ನೀಡಲು ಹೊರಟಿರುವುದು ಅತ್ಯಂತ ಖಂಡನೀಯ. ಈ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಸದನದಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸುವುದಿತ್ತು. ರಾಜ್ಯದ ಜನರ ಹಿತ ಕಾಪಾಡಬೇಕಾದ ರಾಜ್ಯಪಾಲರು ಬಿಜೆಪಿ ಪಕ್ಷದ ಏಜೆಂಟರಂತೆ ವರ್ತಿಸಿ ಸರ್ಕಾರ ನೀಡಿದ ಭಾಷಣವನ್ನು ಮಾಡದೆ ಸದನದಿಂದ ಹೊರ ನಡೆದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ.
ರಾಜ್ಯಪಾಲರ ಈ ನಡೆಯು ವಿವಾದಕ್ಕೆ ಕಾರಣವಾಗಿ ಈ ಸಂದರ್ಭದಲ್ಲಿ ನಡೆದ ಗೊಂದಲದಲ್ಲಿ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಬಟ್ಟೆಗೆ ಹಾನಿಯಾಗುವಂತೆ ಬಿಜೆಪಿ ಸದಸ್ಯರು ವರ್ತಿಸಿರುವುದು ಅಘಾತಕಾರಿ. ಸದನಲ್ಲಿ ಪ್ರಶ್ನಿಸುವುದು, ಚರ್ಚಿಸುವುದು, ಸಂವಿಧಾನದ ಆಶಯಗಳು ಜಾರಿಯಾಗುವಂತೆ ಆಗ್ರಹಿಸುವದು ಸದನದ ಸದಸ್ಯರ ಕರ್ತವ್ಯವಾಗಿರುತ್ತದೆ. ಬಿ.ಕೆ. ಹರಿಪ್ರಸಾದ್ ಅವರು ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾರೆ, ಆದರೆ ಆ ಸಂದರ್ಭದಲ್ಲಿ ಅವರ ವಿರುದ್ಧ ನಡೆದ ಘಟನೆಯು ಪ್ರಜಾಪ್ರಭುತ್ವದ ಮೌಲ್ಯಕ್ಕೆ ಮಾರಕವಾಗಿದೆ. ಬಿಜೆಪಿಯು ದೇಶದಾದ್ಯಂತ ತನ್ನ ನಿಗೂಡ ಅಜೆಂಡಾಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದು ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಮತ್ತು ಸದನದ ಸದಸ್ಯರ ಗೌರವಕ್ಕೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ ಎಂದು ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.