ಫೆ.12 ರಂದು ‘ಮರಳಿ ಮನಸಾಗಿದೆ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ
ಪುತ್ತೂರು: ಕಥೆಯೇ ಪ್ರಮುಖ ಜೀವಾಳವಾಗಿರುವ ಮೆಡಿಕಲ್ ವಿಚಾರದ ಸುತ್ತ ಹೆಣೆದಿರುವ ‘ಮರಳಿ ಮನಸಾಗಿದೆ’ ಕನ್ನಡ ಚಲನಚಿತ್ರ ಫೆ.12 ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ. ಚಿತ್ರದ ಬಗ್ಗೆ ಪ್ರೇಕ್ಷಕರ ಅಭಿರುಚಿ ಹೆಚ್ಚಿಸುವ ದೃಷ್ಟಿಯಿಂದ ಪುತ್ತೂರಿನ ಜಿಎಲ್ ಮಹಲ್‌ನ ಭಾರತ್ ಟಾಕೀಸಿನಲ್ಲಿ ಜ.24 ರಂದು ಪ್ರೀಮಿಯರ್ ಶೋ ನಡೆಸಲಾಗುವುದು ಎಂದು ಚಿತ್ರದ ನಾಯಕ ನಟ ಪುತ್ತೂರಿನ ಅರ್ಜುನ್ ವೇದಾಂತ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಈ ಸಿನೆಮಾದ ಬಹುತೇಕ ಚಿತ್ರೀಕರಣ ಕರಾವಳಿ ಭಾಗದಲ್ಲಿ ನಡೆಸಲಾಗಿದೆ. ನಾಗರಾಜ್ ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕರಾವಳಿಯ ಪ್ರಸಿದ್ದ ಹಾಸ್ಯನಟ ಭೋಜರಾಜ್ ವಾಮಂಜೂರು, ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಹಿರಿಯ ನಟರಾದ ನಾಗಾಭರಣ, ಸಂಗೀತ ಅನಿಲ್, ಸ್ವಾತಿ, ಗಿರೀಶ್ ಜತ್ತಿ, ಹಾಸ್ಯನಟ ಸೀರುಂಡೆ ರಘು ಮತ್ತಿತರರು ನಟಿಸಿದ್ದಾರೆ. ನಾಯಕಿ ನಟಿಯರಾಗಿ ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್ ನಟಿಸಿರುವ ಚಿತ್ರ ಸೆನ್ಸಾರ್ ಬೋರ್ಡಿನಿಂದ ಶ್ಲಾಘನೆ ಸಹಿತ ಕುಟುಂಬ ಸಮೇತ ವೀಕ್ಷಣೆಯ ಯುಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
ಅದ್ದೂರಿಯಾಗಿ ಮೂಡಿಬಂದಿರುವ ಚಿತ್ರದ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ನಿರ್ದೇಶಕ ನಾಗರಾಜ್ ಶಂಕರ್ ನಿರ್ವಹಿಸಿದ್ದಾರೆ. ಬಹುತೇಕ ಕರಾವಳಿ ಭಾಗದ ಕಲಾವಿದರನ್ನು ಒಳಗೊಂಡ ಚಿತ್ರದ ಸಹ ನಿರ್ದೇಶಕರಾಗಿ ಅಶಿತ್ ಸುಬ್ರಹ್ಮಣ್ಯ, ಸಂಗೀತ ವಿನು ಮನಸು, ಹಾಲೇಶ್ ಎಸ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಹೊಂದಿರುವ ಈ ಚಿತ್ರಕ್ಕೆ ಮುದೇಗೌಡ್ರು ನವೀನ್ ಕುಮಾರ್ ಆರ್.ಒ, ತೆಲಿಗಿ ಮಲ್ಲಿಕಾರ್ಜುನಪ್ಪ, ಆಶಿತ್ ಸುಬ್ರಹ್ಮಣ್ಯ ಮತ್ತು ನಾಗರಾಜ್ ಶಂಕರ್ ನಿರ್ಮಾಪಕರಾಗಿದ್ದಾರೆ. ವಿಜಯಕುಮಾರ್ ಎಸ್ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ 5 ಸುಮಧುರ ಹಾಡುಗಳಿವೆ.
ಹಾಸ್ಯನಟ ಭೋಜರಾಜ ವಾಮಂಜೂರು ಅವರು ಮಾತನಾಡಿ, ವಿಭಿನ್ನ ರೀತಿಯಲ್ಲಿ ಈ ಚಿತ್ರಕತೆಯನ್ನು ನಿರೂಪಣೆ ಮಾಡಲಾಗಿದೆ. ಬೆಂಗಳೂರು ಮತ್ತು ಮಂಗಳೂರು ಕನ್ನಡವನ್ನು ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಚಿತ್ರ ತುಂಬಾ ಉತ್ತಮವಾಗಿ ಮೂಡಿಬಂದಿದೆ. ಜನರು ನಮ್ಮ ಪ್ರಯತ್ನಕ್ಕೆ ಸಿನಿಮಾ ನೋಡುವ ಮೂಲಕ ಆಶೀರ್ವಾದ ಮಾಡುವಂತೆ ವಿನಂತಿಸಿದರು.
ಗೋಷ್ಟಿಯಲ್ಲಿ ನಿರ್ಮಾಪಕ ಸಹನಿರ್ದೇಶಕ ಆಶಿತ್ ಸುಬ್ರಹ್ಮಣ್ಯ, ವಿತರಕ ಬಾಲಕೃಷ್ಣ ಶೆಟ್ಟಿ ಕುದ್ಕಾಡಿ ಹಾಗೂ ನವೀನ್ ಕುಲಾಲ್ ಉಪಸ್ಥಿತರಿದ್ದರು.