ಕರಿಮಣಿ ಸರಕ್ಕಾಗಿ ಒಂಟಿ ವೃದ್ಧೆಯ ಕೊಲೆ: ಬಂಧನ
ಕಾಸರಗೋಡು: ಹಣಕ್ಕಾಗಿ 72 ವರ್ಷದ ವೃದ್ಧ ಮಹಿಳೆಯನ್ನು ಕೊಲೆಗೈದು ಕರಿಮಣಿ ಸರ ಎಗರಿಸಿದ ಪ್ರಕರಣ ನಡೆದಿದ್ದು ಕುಂಬಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಮೊವ್ವಾರ್ ಎಂಬಲ್ಲಿ 72 ವರ್ಷದ ಪುಷ್ಪಲತಾ ಶೆಟ್ಟಿ ಎಂಬ ಮಹಿಳೆಯ ಕೊಲೆ ನಡೆದಿತ್ತು. ಬದಿಯಡ್ಕ ಪೆರ್ಡಾಲ ನಿವಾಸಿ ಪರಮೇಶ್ವರ ಅಲಿಯಾಸ್ ರಮೇಶ್ ನಾಯಕ್ (47) ಬಂಧಿತ ಆರೋಪಿ.
ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಮೊವ್ವಾರ್ ಗ್ರಾಮದ ಅಜಿಲದಲ್ಲಿ ಪುಷ್ಪಲತಾ ಶೆಟ್ಟಿ ಒಬ್ಬಂಟಿಯಾಗಿ ತನ್ನ ಮನೆಯಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಗ್ಗೆ ಅವರು ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಕೊಲೆ ಎಂದು ಶಂಕಿಸಿದ್ದರು. ಶುಕ್ರವಾರ ಮಧ್ಯಾಹ್ನ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ, ಉಸಿರುಗಟ್ಟಿಸಿ ಸಾವನ್ನಪ್ಪಿದ್ದಾಗಿ ಪತ್ತೆಯಾಗಿತ್ತು.
ಪ್ರಕರಣ ದಾಖಲಿಸಿದ ಪೊಲೀಸರು ಅಪರಾಧ ನಡೆದ ಸಮಯದಲ್ಲಿ ಅಲ್ಲಿನ ಪರಿಸರಕ್ಕೆ ಬಂದಿದ್ದ ಜನರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ರಮೇಶ್ ನಾಯಕ್ ಅದೇ ಪ್ರದೇಶದಲ್ಲಿ ಹುಲ್ಲು ಕಟ್ಟಿಂಗ್ ಮಾಡುತ್ತಿದ್ದುದನ್ನು ಕೆಲವರು ನೋಡಿದ್ದರು. ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ, ಮೈಮೇಲೆ ಗಾಯಗಳಿರುವುದು ಪತ್ತೆಯಾಗಿತ್ತು. ಅದು ಕಾಳುಮೆಣಸು ಕೀಳುವ ವೇಳೆ ಆಗಿದ್ದು ಎಂದು ಸುಳ್ಳು ಹೇಳಿದ್ದ. ಬಳಿಕ ಬೆಂಡೆತ್ತಿದಾಗ ಆರೋಪಿ ಕೊಲೆ ಮಾಡಿದ್ದನ್ನು ಬಾಯಿಬಿಟ್ಟಿದ್ದಾನೆ.
ಆರೋಪಿ ರಮೇಶ್ ನಾಯಕ್ ಆರ್ಥಿಕ ಸಮಸ್ಯೆ ಹೊಂದಿದ್ದು 8 ಲಕ್ಷದಷ್ಟು ಸಾಲ ಹೊಂದಿದ್ದ. ಮನೆ ಕಟ್ಟಲು ಭೂಮಿ ಖರೀದಿಸಲು ಸಾಲ ಪಡೆದಿದ್ದ. ಹಣಕ್ಕಾಗಿ ಪುಷ್ಪಲತಾ ಧರಿಸಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ, ಈ ವೇಳೆ ಮಹಿಳೆ ವಿರೋಧಿಸಿ ಜಟಾಪಟಿ ನಡೆಸಿದ್ದು, ಈ ವೇಳೆ ಆಕೆಯ ಕತ್ತು ಹಿಸುಕಿ ಕೊಂದಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಸುಮಾರು 28 ಗ್ರಾಂ ತೂಕದ ಕರಿಮಣಿಯನ್ನು ಕದ್ದೊಯ್ದಿದ್ದು ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.