ಟೋಲ್ ಪರಿಣಾಮ: ಕಾಸರಗೋಡು-ಮಂಗಳೂರು ಬಸ್ ದರ ದುಬಾರಿ

ಟೋಲ್ ಪರಿಣಾಮ: ಕಾಸರಗೋಡು-ಮಂಗಳೂರು ಬಸ್ ದರ ದುಬಾರಿ

ಕಾಸರಗೋಡು: ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್ ಸಂಗ್ರಹ ಆರಂಭವಾದ ಹಿನ್ನೆಲೆಯಲ್ಲಿ, ಕಾಸರಗೋಡು-ಮಂಗಳೂರು ನಡುವೆ ಸಂಚರಿಸುವ ಕರ್ನಾಟಕ ಸಾರಿಗೆ (KSRTC) ಬಸ್ ದರವನ್ನು ಹೆಚ್ಚಿಸಲಾಗಿದ್ದು, ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಅಂತರರಾಜ್ಯ ಹೆದ್ದಾರಿಯ ಟೋಲ್ ಬೂತ್ ಮೂಲಕ ಹಾದುಹೋಗುವ ಪ್ರತಿ ಪ್ರಯಾಣಿಕರು ಈಗ ಮೂಲ ದರಕ್ಕಿಂತ ಹೆಚ್ಚುವರಿಯಾಗಿ 7 ರೂಪಾಯಿ ಪಾವತಿಸಬೇಕಾಗುತ್ತದೆ. ಈವರೆಗೆ ಕಾಸರಗೋಡಿನಿಂದ ಮಂಗಳೂರಿಗೆ 81 ರೂಪಾಯಿ ಇದ್ದ ಟಿಕೆಟ್ ದರವು ಇದೀಗ 88 ರೂಪಾಯಿಗಳಿಗೆ ಏರಿಕೆಯಾಗಿದೆ. ವಿಶೇಷವೆಂದರೆ, ಟೋಲ್ ದಾಟಿದ ತಕ್ಷಣದ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರೂ ಈ ಹೆಚ್ಚುವರಿ ದರವನ್ನು ಭರಿಸಬೇಕಿದೆ.

ಕುಂಬಳೆಯಲ್ಲಿ ಟೋಲ್ ಸಂಗ್ರಹ ಆರಂಭವಾದ ಕಾರಣ ಅನಿವಾರ್ಯವಾಗಿ ದರ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ. "ಒಂದು ಬಸ್ ಕಾಸರಗೋಡಿನಿಂದ ಮಂಗಳೂರಿಗೆ ಹೋಗುವಾಗ ಪ್ರತಿ ಬಾರಿ ಸುಮಾರು 220 ರೂಪಾಯಿ ಟೋಲ್ ಪಾವತಿಸಬೇಕಾಗುತ್ತದೆ. ಈ ಹೊರೆಯನ್ನು ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ" ಎಂಬುದು ಅಧಿಕಾರಿಗಳ ವಾದವಾಗಿದೆ. ಪ್ರಸ್ತುತ ಕರ್ನಾಟಕದ ೪೩ ಬಸ್‌ಗಳು ಈ ಮಾರ್ಗದಲ್ಲಿ ದಿನಕ್ಕೆ ತಲಾ ಏಳು ಬಾರಿ ಸಂಚರಿಸುತ್ತಿವೆ.

ಕಾಸರಗೋಡಿನ ಬಹುತೇಕ ಜನರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮಂಗಳೂರನ್ನು ಅವಲಂಬಿಸಿದ್ದು, ಕರ್ನಾಟಕದ ಬಸ್ಗಳಲ್ಲೇ ಹೆಚ್ಚು ಸಂಚರಿಸುತ್ತಾರೆ. ಏಕಾಏಕಿ ದರ ಏರಿಕೆಯಾಗಿರುವುದು ದಿನನಿತ್ಯದ ಪ್ರಯಾಣಿಕರಲ್ಲಿ ತೀವ್ರ ನಿರಾಸೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article