‘ಒಡೆದ ಜಗತ್ತನ್ನು ಕಲೆ, ಸಾಹಿತ್ಯ ಒಂದುಗೂಡಿಸಬಲ್ಲವು’: ನಾಗತಿಹಳ್ಳಿ ಚಂದ್ರಶೇಖರ

‘ಒಡೆದ ಜಗತ್ತನ್ನು ಕಲೆ, ಸಾಹಿತ್ಯ ಒಂದುಗೂಡಿಸಬಲ್ಲವು’: ನಾಗತಿಹಳ್ಳಿ ಚಂದ್ರಶೇಖರ


ಮಂಗಳೂರು: ‘ಇಡೀ ಜಗತ್ತು ಯುದ್ಧದ ತಲ್ಲಣಗಳಿಂದ ತುಂಬಿದೆ. ವಿಪ್ಲವ, ದಂಗೆ, ಲಾಭಕೋರತನ, ಲಾಲಸೆಗಳು ದಿಗಿಲು ಹುಟ್ಟಿಸುತ್ತಿವೆ. ಇಂತಹ ಸಂದರ್ಭದಲ್ಲಿ, ಒಡೆದುಹೋಗಿರುವ ಜಗತ್ತನ್ನು ಕಲೆ, ಸಾಹಿತ್ಯ, ಸಂಸ್ಕೃತಿ ಮಾತ್ರ ಒಂದುಗೂಡಿಸಬಲ್ಲವು’ ಎಂದು ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಹೇಳಿದರು. 

ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಬುಧವಾರ ಸಂಜೆ ಇಲ್ಲಿ ಆಯೋಜಿಸಿದ್ದ, ‘ಸಂದೇಶ ಪ್ರಶಸ್ತಿ-2026’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿಗೆ ಪ್ರಸ್ತುತ ಅತ್ಯಗತ್ಯವಾಗಿರುವುದು ಸೌಹಾರ್ದ, ಸಾಮರಸ್ಯ ಹಾಗೂ ಎಲ್ಲರನ್ನು ಒಳಗೊಳ್ಳುವಿಕೆ. ಆದರೆ ಇತ್ತೀಚೆಗೆ ವಿಘಟಿತ ಸಮಾಜವನ್ನೇ ಕಾಣುತ್ತಿದ್ದೇವೆ. ಜಾತ್ಯತೀತ ವ್ಯವಸ್ಥೆಯನ್ನು ಕಾಪಾಡುವುದರಿಂದ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ’ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಕಾಂತಾವರ ಕನ್ನಡ ಸಂಘದ ಡಾ.ನಾ.ಮೊಗಸಾಲೆ, ‘ಇಂದಿನ ಮಕ್ಕಳಿಗೆ ಕನ್ನಡ ಬೇಡವಾಗಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಏಳೆಂಟು ದಾಟದು. ಕನ್ನಡದ ಎಲ್ಲ ಚಟುವಟಿಕೆ ನಿಲ್ಲುವ ಸ್ಥಿತಿ ತಲುಪಿದೆ. ಕನ್ನಡ ಕಾರ್ಯಗಳನ್ನು ಮುಂದುವರಿಸಲು ಉತ್ತರಾಧಿಕಾರಿಗಳು ಸಿಕ್ಕುವುದು ಕಷ್ಟ’ ಎಂದರು. 

ಸಂದೇಶ ಪ್ರತಿಷ್ಠಾನದ ಅಧ್ಯಕ್ಷರಾದ ಬಳ್ಳಾರಿ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. 

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ, ಶಾಸಕ ಡಿ.ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶಾಲೆಟ್ ಲವೀನಾ ಪಿಂಟೊ, ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಪ್ರತಿಷ್ಠಾನದ ವಿಶ್ವಸ್ಥರಾದ ಜಾಯ್ ಕ್ಯಾಸ್ತಲಿನೊ, ಫಾ.ಸುದೀಪ್ ಪೌಲ್  ಭಾಗವಹಿಸಿದರು.

ಪ್ರಶಸ್ತಿ ಪುರಸ್ಕೃತರು: ನಾ.ಮೊಗಸಾಲೆ (ಕನ್ನಡ), ಪ್ಯಾಟ್ರಿಕ್ ಕಾಮಿಲ್ ಮೊರಾಸ್ (ಕೊಂಕಣಿ), ಇಂದಿರಾ ಹೆಗ್ಡೆ (ತುಳು), ಎಸ್.ಜಿ.ತುಂಗರೇಣುಕ (ಮಾಧ್ಯಮ), ಸೈಮನ್ ಪಾಯಸ್ (ಸಂಗೀತ), ಶ್ರೀನಿವಾಸ ಜಿ.ಕಪ್ಪಣ್ಣ (ಕಲೆ), ದತ್ತಾತ್ರೇಯ ಅರಳಿಕಟ್ಟೆ (ಶಿಕ್ಷಣ), ನವಜೀವನ ರಿಹ್ಯಾಬಿಲಿಟೇಷನ್ ಸೆಂಟರ್ ಫಾರ್ ದಿ ಡಿಸೇಬಲ್ಡ್ (ವಿಶೇಷ ಪ್ರಶಸ್ತಿ)

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article