ಬೈಂದೂರಿನಲ್ಲಿ ಚಿರತೆ ಸೆರೆ
Friday, January 16, 2026
ಕುಂದಾಪುರ: ಬೈಂದೂರು ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡು ಜನರನ್ನು ಭೀತಿಗೊಳಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆಯಿಟ್ಟ ಬೋನಿಗೆ ಶುಕ್ರವಾರ ಬಿದ್ದಿದೆ.
ಚಿರತೆ ಸಂಚಾರದ ಬಗ್ಗೆ ಪ್ರತ್ಯಕ್ಷದರ್ಶಿಗಳು, ಸಾರ್ವಜನಿಕರ ದೂರಿನ ಹಿನ್ನೆಲೆ ಚಿರತೆ ಸೆರೆಗಾಗಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದರು. ಹೇರೂರು ಗ್ರಾಮದ ಚಿಕ್ತಾಡಿ ಎಂಬಲ್ಲಿರುವ ಖಾಸಗಿ ತೋಟದಲ್ಲಿ ಗುರುವಾರದಂದು ಬೋನು ಇರಿಸಿ ಚಿರತೆಗಾಗಿ ಕಾದಿದ್ದರು.
ಶುಕ್ರವಾರ ಮುಂಜಾನೆ ಅಂದಾಜು 3 ವರ್ಷ ಪ್ರಾಯದ ಹೆಣ್ಣು ಚಿರತೆ ಬೋನಿಗೆ ಬಿದ್ದಿರುವುದು ಕಂಡುಬಂದಿದೆ.
ಸ್ಥಳಕ್ಕೆ ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ ಸಂದೇಶ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಕೆ. ಸದಾಶಿವ, ಗಸ್ತು ಅರಣ್ಯ ಪಾಲಕ ಶೃತಿ ಗೌಡ, ಅರಣ್ಯ ವೀಕ್ಷಕ ಸುರೇಶ್ ಗೌಡ ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.