ನಾಳೆಯಿಂದ ಅಂತಾರಾಷ್ಟ್ರೀಯ  ಗಾಳಿಪಟ ಉತ್ಸವ-ಸಿದ್ಧತೆ ಪೂರ್ಣ: 15 ದೇಶಗಳ ಗಾಳಿಪಟುಗಳ ಆಗಮನ

ನಾಳೆಯಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-ಸಿದ್ಧತೆ ಪೂರ್ಣ: 15 ದೇಶಗಳ ಗಾಳಿಪಟುಗಳ ಆಗಮನ


ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ತಣ್ಣೀರು ಬಾವಿ ಬ್ಲೂ ಬೇ ಬೀಚ್‌ನಲ್ಲಿ 9ನೇ ಅವೃತ್ತಿಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಜ.17 ಮತ್ತು 18ರಂದು ನಡೆಯಲಿದೆ. ಸಂಜೆ 3 ಗಂಟೆಗೆ ಆರಂಭವಾಗುವ ಉತ್ಸವದಲ್ಲಿ ಭಾಗವಹಿಸಲು 15 ದೇಶಗಳ 30 ಅಂತರಾಷ್ಟ್ರೀಯ ಗಾಳಿಪಟುಗಳು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ.

ಭಾರತ ಮತ್ತು ವಿದೇಶಗಳಿಂದ ಸೇರಿ ಒಟ್ಟು 62 ನುರಿತ ಗಾಳಿಪಟ ಹಾರಾಟಗಾರರು ತಮ್ಮ ವೈವಿಧ್ಯಮಯ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹೊರ ದೇಶಗಳಿಂದ ಆಗಮಿಸಿದ್ದ ಅಂತಾರಾಷ್ಟ್ರೀಯ ಗಾಳಿಪಟಗಾರರನ್ನು ಸ್ವಾಗತಿಸಿದ ಅವರು, ಉತ್ಸವದಲ್ಲಿ ಸಾಂಪ್ರದಾಯಿಕ, ಏರೋಫಾಯಿಲ್, ಇನ್‌ಫ್ಲೇಟಬಲ್ ಹಾಗೂ ಕ್ವಾಡ್ ಲೈನ್ ಸ್ಪೋರ್ಚ್ ಗಾಳಿಪಟಗಳ ಪ್ರದರ್ಶನ ಇರಲಿದೆ ಎಂದರು.

ಗಾಳಿಪಟ ಉತ್ಸವವನ್ನು ಆಯೋಜಿಸುತ್ತಿರುವ ಟೀಮ್ ಮಂಗಳೂರು ತಂಡದಿಂದ ಸಾಂಸ್ಕೃತಿಕ ಗಾಳಿಪಟಗಳ ಜತೆಗೆ ವಿಶೇಷವಾಗಿ ತುಳುನಾಡಿನ ಸಾಂಸ್ಕೃತಿಕ ವೈಭವ ಪ್ರತಿಬಿಂಬಿಸುವ ರಥ ಎಂಬ ಹೊಸ ಗಾಳಿಪಟವನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.

ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಮಾತನಾಡಿ, ಬೀಚ್‌ನ 2 ಕಿ.ಮೀ. ಅಂತರದಲ್ಲಿ 10 ಕಡೆ 1,900 ಕಾರುಗಳಿಗೆ ಹಾಗೂ ನಾಲ್ಕು ಕಡೆ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಲ್ತಾನ್ ಬತ್ತೇರಿಯಿಂದ ಫಲ್ಗುಣಿ ನದಿ ಮೂಲಕ ಫೆರಿ ಸೇವೆಯ ಸೌಲಭ್ಯ ಪಡೆದು ತಣ್ಣೀರುಬಾವಿ ಬೀಚ್‌ಗೆ ಆಗಮಿಸಬಹುದು. ಕೆಐಒಸಿಎಲ್ ವೃತ್ತದಿಂದ ಬ್ಲೂ ಬೇ ಬೀಚ್‌ಗೆ ಬಸ್ ಮೂಲಕ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆ ಇರಲಿದೆ ಎಂದು ಹೇಳಿದರು.

ಟೀಮ್ ಮಂಗಳೂರು ತಂಡದ ಸರ್ವೇಶ್ ರಾವ್ ಮಾತನಾಡಿ, ಸಾರ್ವಜನಿಕ ಸುರಕ್ಷತೆ ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳನ್ನು ಕಾಪಾಡುವ ದೃಷ್ಟಿಯಿಂದ ಮಾಂಜಾ (ಗಾಜು ಲೇಪಿತ ದಾರ) ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಗಾಳಿಪಟ ತಜ್ಞರು ಈ ಬಗ್ಗೆ ನಿಗಾ ವಹಿಸಲಿದ್ದಾರೆ. 130 ಸ್ವಯಂ ಸೇವಕರು ಗಾಳಿಪಟ ಉತ್ಸವದಲ್ಲಿ ಕಾರ್ಯನಿರತರಾಗಿದ್ದಾರೆ ಎಂದರು.

1995ರಲ್ಲಿ ಸ್ಥಾಪಿತವಾದ ಟೀಮ್ ಮಂಗಳೂರು ಗಾಳಿಪಟ ಹಾರಾಟವನ್ನು ಕಲೆಯಾಗಿ ರೂಪಿಸಿಕೊಂಡು ಬಂದಿದೆ. ಎಂಆರ್‌ಪಿಎಲ್, ಒಎನ್‌ಜಿಸಿ ಮತ್ತು ಇತರ ಖಾಸಗಿ ಸಂಸ್ಥೆಗಳ ಪ್ರಾಯೋಜಕತ್ವ, ಜಿಲ್ಲಾಡಳಿತದ ಸಹಕಾರದೊಂದಿಗೆ ಗಾಳಿಪಟ ಉತ್ಸವ ಸಾರ್ವಜನಿಕರಿಗೆ ಮನರಂಜನೆ ನೀಡಲಿದೆ ಎಂದು ಟೀಮ್ ಮಂಗಳೂರು ತಂಡದ ಪ್ರಾಣೇಶ್, ಪ್ರಶಾಂತ್, ದಿನೇಶ್ ಹೊಳ್ಳ ಹಾಗೂ ಇತರರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಿಸಿಪಿ ಮಿಥುನ್ ಇದ್ದರು.

ಅತಿಥ್ಯ ಅತ್ಯುತ್ತಮ..

ಮಂಗಳೂರಿಗೆ ಪ್ರಥಮ ಬಾರಿಗೆ ಗಾಳಿಪಟ ಉತ್ಸವದಲ್ಲಿ ಭಾಗಿಯಾಗಲು ಬಂದಿದ್ದು, ಕಾರ್ಯಕ್ರಮದ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಸ್ವಿಜರ್‌ಲ್ಯಾಂಡ್‌ನ ಅಂತಾರಾಷ್ಟ್ರೀಯ ಗಾಳಿಪಟಗಾರ ಮೈರೆ ರೆನೆ ಅಭಿಪ್ರಾಯಿಸಿದರು. ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನ ಗಾಳಿಪಟ ಉತ್ಸವದಲ್ಲಿ ಭಾಗಿಯಾಗುತ್ತಿದ್ದೇನೆ. ಇಲ್ಲಿನ ಸುಂದರ ಕಡಲ ಕಿನಾರೆಯ ಜತೆಗೆ ಇಲ್ಲಿನ ಜನರೂ ಅತ್ಯಂತ ಸ್ನೇಹಪ್ರಿಯರು. ಆತಿಥ್ಯವೂ ಉತ್ತಮ ಎಂದು ಥಾಯ್ಲೆಂಡ್‌ನ ಗಾಳಿಪಟಗಾರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article