ಸರ್ಕಾರಿ ಬಸ್‌ಗೆ ಟಿಪ್ಪರ್ ಢಿಕ್ಕಿ: ಹಲವರಿಗೆ ಗಾಯ
Monday, January 5, 2026
ಕುಂದಾಪುರ: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂರು-ನೇರಳಕಟ್ಟೆ ಮಾರ್ಗದ ಶೆಟ್ರಕಟ್ಟೆ ಎಂಬಲ್ಲಿನ ರಸ್ತೆ ತಿರುವಿನಲ್ಲಿ ನಡೆದಿದೆ.
ಕುಂದಾಪುರದಿಂದ ಆಜ್ರಿ-ಸಿದ್ದಾಪುರ ಕಡೆಗೆ ಸಾಗುತ್ತಿದ್ದ ಸರ್ಕಾರಿ ಬಸ್‌ಗೆ ನೇರಳಕಟ್ಟೆಯಿಂದ ಮಣ್ಣು ತುಂಬಿಸಿಕೊಂಡು ತಲ್ಲೂರಿನತ್ತ ಸಾಗುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ.
ಬಸ್‌ನ ಬಲ ಬದಿಗೆ ಢಿಕ್ಕಿ ಹೊಡೆದಿದ್ದರಿಂದ ಚಾಲಕನ ಬದಿಯ ಒಂದು ಪಾರ್ಶ್ವ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿವೆ.
ಸಂಜೆ ಸಮಯವಾದ್ದರಿಂದ ಬಸ್‌ನಲ್ಲಿ ಬಹುತೇಕ ಕಾಲೇಜು ವಿದ್ಯಾರ್ಥಿಗಳಿದ್ದು, ಕಿಟಿಕಿ ಬದಿಯಲ್ಲಿ ಕೂತವರೆಲ್ಲರಿಗೂ ಗಂಭೀರ ಗಾಯಗಳಾಗಿದೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.