ಕೋಟ ವೈದ್ಯಾಧಿಕಾರಿಗಳ ವರ್ಗ: ಸ್ಥಳೀಯರ ಪ್ರತಿಭಟನೆ

ಕೋಟ ವೈದ್ಯಾಧಿಕಾರಿಗಳ ವರ್ಗ: ಸ್ಥಳೀಯರ ಪ್ರತಿಭಟನೆ


ಕುಂದಾಪುರ: ಬ್ರಹ್ಮಾವರ ತಾಲೂಕು ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ‌ ಹೆರಿಗೆ ತಜ್ಞರೂ ಸೇರಿದಂತೆ ಹಲವು ವಿಭಾಗದ ವೈದ್ಯರನ್ನು ಬೇರೆಡೆಗೆ ಸ್ಥಳಾಂತರಿಸಿದ ರಾಜ್ಯ ಸರಕಾರದ ನಿಲುವಿನ ವಿರುದ್ಧ ಕೋಟದ ಸಮುದಾಯ ಆರೋಗ್ಯ ಕೇಂದ್ರದ ಎದುರು ಕೋಟದ ಸಮಸ್ತ ನಾಗರಿಕರು ಬೃಹತ್ ಪ್ರತಿಭಟನೆ  ನಡೆಸಿದರು. 

ಕೋಟದ ಮಹತೋಭಾರ ಶ್ರೀ ಹಿರೇ ಮಹಾಲಿಂಗೇಶ್ವರ ದೇಗುಲದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಪ್ರತಿಭಟನೆಗೆ ಚಾಲನೆ ನೀಡಿ, ರ್‍ಯಾಲಿ ಮೂಲಕ ಕೋಟ ಸಮಯದಾಯ ಆರೋಗ್ಯ ಕೇಂದ್ರಕ್ಕೆ ಬರಲಾಯಿತು.

ಈ ವೇಳೆ ಮಾತನಾಡಿದ ಅವರು, ಸಮುದಾಯ ಆರೋಗ್ಯ ಕೇಂದ್ರವು ಗ್ರಾಮೀಣ  ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ದೂರದ ಊರಿನ ರೋಗಿಗಳು ಸಹ ಇಲ್ಲಿ ಬಂದು ಪ್ರಯೋಜನ ಪಡೆಯುತ್ತಿದ್ದಾರೆ. ಕೋಟ ಗ್ರಾಮಪಂಚಾಯತ್ ಈ ಆಸ್ಪತ್ರೆಗೆ ಬೇಕಾದ ಸಹಕಾರವನ್ನು ನೀಡುತ್ತಿದೆ. ರಾಜ್ಯ ಸರಕಾರ ಕೈಗೊಂಡ ಈ ನಿಲುವು ಗ್ರಾಮೀಣ ಜನರ ಆರೋಗ್ಯ ಸೇವೆಗೆ ತೊಡಕುಂಟುಮಾಡಿದೆ ಇದು ಸರಿಯಲ್ಲ, ಸರಕಾರ ಈ ಆದೇಶ ವಾಪಾಸ್ ಪಡೆಯಬೇಕು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ಸಿಬಂದಿಗಳನ್ನು ನೇಮಿಸಿ ಮೊದಲಿನಂತೆ ಈ ಭಾಗದ ಜನರಿಗೆ ಸೇವೆ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸಭೆಯ ಸಂಯೋಜಕ ದಿನೇಶ್ ಗಾಣಿಗ ಮಾತನಾಡಿ, ರಾಜ್ಯ ಸರಕಾರ ಸಮುಯದಾಯ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿಗೊಳಿಸುವುದನ್ನು ಬಿಟ್ಟು ಕೆಳ ಹಂತಕ್ಕೊಯ್ದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಾಲಿಗೆ ಸೇರಿಸುವ ಹುನ್ನಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಶೀಘ್ರದಲ್ಲಿ ಈ ಆದೇಶ ವಾಪಾಸ್ ಪಡೆಯಿರಿ. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ಇದರ ವಿರುದ್ಧ ದೊಡ್ಡ ರೀತಿಯಲ್ಲಿ ಜನ ಸಿಡಿದೇಳಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಡಿ.ಎಚ್.ಓ. ವಿರುದ್ಧ ಹರಿಹಾಯ್ದ ಗ್ರಾಮಸ್ಥರು:

ಪ್ರತಿಭಟನೆ ಪ್ರಾರಂಭಗೊಂಡು ಮೂರು ತಾಸಿನ ನಂತರ ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು  ವಿರುದ್ಧ ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರ ಪೂಜಾರಿ ಸೇರಿದಂತೆ ಹಲವು ಪ್ರತಿಭಟನಾಕಾರರು ಹರಿಹಾಯ್ದರು.

ಡಿಎಚ್ ಓ ಪ್ರತಿಭಟನಾಕಾರರನ್ನುದ್ದೇಶಿಸಿ ಯಾಕಾಗಿ ಪ್ರತಿಭಟನೆ ಮಾಡುತ್ತೀರಿ, ವೈದ್ಯರನ್ನು ಬೇರೆಡೆ ಸ್ಥಳಾಂತರಿಸುವ ಆದೇಶ ನಿಮ್ಮಲಿ‌ದೆಯಾ? ಎಂದು ಖಾರವಾಗಿ  ಪ್ರಶ್ನಿಸಿದ್ದು  ಜನರ  ಆಕ್ರೋಶ ಹೆಚ್ಚಿಸಿತು.  ಪ್ರತಿಭಟನಾಕಾರರು ನಿಮಗೆ ಪ್ರತಿಭಟನಾ ಸ್ಥಳಕ್ಕೆ ಬರುವುದಕ್ಕೆ ಸಮಯ ನೀಡಿದ್ದೇವೆ. ಆದರೆ ವಿಳಂಬವಾಗಿ ಬಂದಿದ್ದೀರಿ. ಇದು ಎಷ್ಟು ಸರಿ? ಜನರ ತಾಳ್ಮೆ ಪರೀಕ್ಷಿಸಬೇಡಿ. ಹೆರಿಗೆ ವೈದ್ಯರನ್ನು ಇಲ್ಲಿಂದ ಸ್ಥಳಾಂತರಿಸುವ ಬಗ್ಗೆ ಸರಕಾರಕ್ಕೆ  ವರದಿ ನೀಡಿದ್ದೀರಿ ಎಂದು ಹರಿಹಾಯ್ದು,  ಇಲ್ಲಿಂದ ಯಾವ ವೈದ್ಯರನ್ನೂ ಸ್ಥಳಾಂತರಿಸದಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ಡಿ.ಎಚ್.ಓ. ಭರವಸೆ:

ಡಿ ಎಚ್ ಓ ಪ್ರತಿಭಟನಾಕಾರರ ಆಕ್ರೋಶಕ್ಕೆ ಸ್ವಲ್ಪ ಬೆದರಿ ಸಮಾಜಯಿಷಿ ನೀಡಿದರು. ಸರಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವೈದ್ಯರ ವರ್ಗಾವಣೆಗೆ ಅಧಿಕೃತ ಆದೇಶ ನೀಡಿಲ್ಲ. ಇಲ್ಲಿನ ಹೆರಿಗೆ ,ಮಕ್ಕಳ ತಜ್ಞ, ಅರವಳಿಕೆ ತಜ್ಞರನ್ನು ಬೇರೆಡೆಗೆ ವರ್ಗಾವಣೆ ಮಾಡುವ ಉದ್ದೇಶ ನಮ್ಮ ಮುಂದಿಲ್ಲ. ಹಾಗೊಂದು ವೇಳೆ ಸರ್ಕಾರಿ ಆದೇಶದಿಂದ ವರ್ಗಾವಣೆಯಾದರೂ  ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಲಾಗುತ್ತದೆ. ಆರೋಗ್ಯ ಇಲಾಖೆ ಜನರ ಪರವಾಗಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸಲಾಗುವುದು. ಇದಕ್ಕೆಲ್ಲ ಪ್ರತಿಭಟನೆ ಬೇಡ ಎಂದು ಉತ್ತರಿಸಿದರು.

ಪ್ರತಿಭಟನಾ ಸಭೆಯಲ್ಲಿ ವಿವಿಧ ಸಂಘಟನೆಗಳವರು, ಮುಖಂಡರು, ಸ್ಥಳೀಯರು  ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article