ಶೆಟ್ರಕಟ್ಟೆ ತಿರುವಿನಲ್ಲಿ ಇನ್ನೊಂದು ಬಲಿ
ಖಾಸಗಿ ಬಸ್‌ಗಳನ್ನು ಓವರ್‌ಟೇಕ್ ಮಾಡುವ ವೇಳೆ ಬೈಕ್ ಸವಾರನೊಬ್ಬ ಎದುರಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ಬಸ್‌ಗೆ ಮುಖಾಮುಖಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಮೃತ ಯುವಕನನ್ನು ಸೌಕೂರು ನಿವಾಸಿ ವಿಜಯ್ ದೇವಾಡಿಗ (26) ಎಂದು ಗುರುತಿಸಲಾಗಿದೆ.
ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ವಿಜಯ್ ಶನಿವಾರ ಬೆಳಗ್ಗೆ ಬೈಕಿನಲ್ಲಿ ತ್ರಾಸಿಯಿಂದ ಸೌಕೂರು ಕಡೆಗೆ ತೆರಳುತ್ತಿದ್ದ ವೇಳೆ ಶೆಟ್ರಕಟ್ಟೆ ತಿರುವಿನಲ್ಲಿ ಖಾಸಗಿ ಬಸ್ ಅನ್ನು ಓವರ್‌ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ.
ಢಿಕ್ಕಿಯ ರಭಸಕ್ಕೆ ವಿಜಯ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರಿಳೆದಿದ್ದಾರೆ. ಶೆಟ್ರಕಟ್ಟೆ ತಿರುವು ಈ ರೀತಿ ಜೀವ ಬಲಿಪಡೆಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿ ಪಡೆದ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಗಳ ಸರಣಿ ನಡೆಯುತ್ತಿರುವ ಶೆಟ್ರಕಟ್ಟೆ ತಿರುವಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬರುತ್ತಿದೆ. ಟಿಪ್ಪರ್ ಅಪಘಾತದ ನಂತರ ರಸ್ತೆ ತಿರುವಿನಲ್ಲಿದ್ದ ಮರಗಳನ್ನು ಕಡಿಯಲಾಗಿತ್ತು. ಏನೇ ಮಾಡಿದರೂ ವಾಹನ ಚಾಲಕರೇ ಸಂಮಯದ ಚಾಲನೆಗೆ ತೊಡಗುವವರೆಗೆ ದುರಂತ ತಪ್ಪಿಸಲಾಗದು.