ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿ ಬಂಧನ
ಕುಂದಾಪುರ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ, ಪ್ರಕರಣ ದಾಖಲಿಸಲ್ಪಟ್ಟು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ತೆಂಕನಿಡಿಯೂರು ನಿವಾಸಿ ಕಿರಣ್ ಪಿಂಟೋ (49) ಎಂದು ಗುರುತಿಸಲಾಗಿದೆ.
ಜನವರಿ 18ರಂದು ಬ್ರಹ್ಮಾವರದ ಬಾರ್ ಎದುರು ನಡೆದ ಹಲ್ಲೆ ಪ್ರಕರಣದಲ್ಲಿ ಕಿರಣ್ ಪಿಂಟೋ ಪ್ರಮುಖ ಆರೋಪಿಯಾಗಿದ್ದು, ಘಟನೆ ವೇಳೆ ಗಾಯಗೊಂಡಿದ್ದ. ಈತನನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು. ಆದರೆ ಜ.21 ರಂದು ಬೆಳಗ್ಗಿನ ಜಾವ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಆರೋಪಿ ಪರಾರಿಯಾಗಿದ್ದನು.
ಈ ಹಿನ್ನೆಲೆ ಬ್ರಹ್ಮಾವರ ಪೊಲೀಸರು ಆರೋಪಿ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ನಿರಂತರ ತನಿಖೆ ಮತ್ತು ಶೋಧ ಕಾರ್ಯದ ಫಲವಾಗಿ ಜ.24 ರಂದು ಕಿರಣ್ ಪಿಂಟೋವನ್ನು ಬಂಧಿಸಿದ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.