ಜ.15 ರಂದು ಮಂಗಳೂರಿನಲ್ಲಿ ‘ಅನುಪಮ’ ಓದುಗರ ‘ಬೆಳ್ಳಿ ಹಬ್ಬ ಸಮಾವೇಶ’

ಜ.15 ರಂದು ಮಂಗಳೂರಿನಲ್ಲಿ ‘ಅನುಪಮ’ ಓದುಗರ ‘ಬೆಳ್ಳಿ ಹಬ್ಬ ಸಮಾವೇಶ’


ಮಂಗಳೂರು: ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟವಾಗುತ್ತಿರುವ ಕೌಟುಂಬಿಕ ಪತ್ರಿಕೆಯಾಗಿರುವ ‘ಅನುಪಮ’ ತನ್ನ 25 ವರ್ಷವನ್ನು ಪೂರ್ಣಗೊಳಿಸಿದ್ದು, ಪತ್ರಿಕೆಯ ರಜತ ವರ್ಷದ ಅಂಗವಾಗಿ ಮಂಗಳೂರಿನ ಪುರಭವನದಲ್ಲಿ ಜ.15ರಂದು ಬೆಳಗ್ಗೆ 10 ಗಂಟೆಗೆ ಮಹಿಳೆಯರ ಬೃಹತ್ ಓದುಗರ ಸಮಾವೇಶ ನಡೆಯಲಿದೆ ಎಂದು ಅನುಪಮ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್.ಎಂ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ 25ನೇ ವರ್ಷದ ಅನುಪಮ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಿರುವರು ಎಂದು ಮಾಹಿತಿ ನೀಡಿದರು. 

ಗೌರವ ಅತಿಥಿಗಳಾಗಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಪೊಲೀಸ್ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ,ಬೆಥನಿ ಸೈಂಟ್ ತೆರೇಸಾ ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ಲೂರ್ಡ್ಸ್, ಅಂತರ್ ರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ, ಆಪ್ತ ಸಮಾಲೋಚಕಿ ಡಾ.ರುಕ್ಸಾನ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸಮೀನಾ ಅಫ್ಘಾನ್ ವಹಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ ನಡೆಯಲಿದೆ. ಕೆ.ಎ.ರೋಹಿಣಿ, ಸರಸ ಬಿ.ಕೃಷ್ಣ ಕಮ್ಮರಡಿ, ಸಮಾಜ ಸೇವಕಿ ಹರಿಣಿ ಕೆ, ಆಯಿಶಾ ಇ. ಶಾಫಿ ಇವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರತಿಭಾವಂತರಿಗೆ ಧ್ವನಿ ನೀಡಿದೆ: 

ಪತ್ರಿಕೋದ್ಯಮವು ಪುರುಷರ ಕ್ಷೇತ್ರವೆಂಬ ಮಾತು ತುಂಬಾ ಹಳೆಯದು, ಈಗ ಮಹಿಳೆಯರು ಈ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ನೂರಾರು ಮಹಿಳಾ ಪತ್ರಕರ್ತೆಯರು ತಮ್ಮ ಸಾಧನೆಯನ್ನು ದಾಖಲಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ. ಆದರೆ ಮುಸ್ಲಿಮ್ ಮಹಿಳೆಯರ ಪಾಲುದಾರಿಕೆ ತುಂಬಾ ಕಡಿಮೆ. 2,000 ಇಸವಿಯಲ್ಲಿ ಮಂಗಳೂರಿನಿಂದ ಮುಸ್ಲಿಮ್ ಮಹಿಳೆಯರಿಂದಲೇ ‘ಅನುಪಮ’ ಎಂಬ ಮಾಸ ಪತ್ರಿಕೆ ಆರಂಭಗೊಂಡಿತು.ಈ ಪತ್ರಿಕೆ ಇದೀಗ 25 ವರ್ಷಗಳನ್ನು ಪೂರ್ಣಗೊಳಿಸಿದ್ದು, ಜಾತಿ, ಜನಾಂಗ,ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಪ್ರತಿಭಾವಂತರಿಗೆ ಅನುಪಮ ಧ್ವನಿ ನೀಡಿದೆ ಎಂದು ಶಹನಾಝ್ ಅಭಿಪ್ರಾಯಪಟ್ಟರು.

‘ಅನುಪಮ’ ಶುದ್ಧ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡಿರುವ ಪತ್ರಿಕೆಯಾಗಿದೆ. 25ನೇ ವರ್ಷ ಪೂರ್ಣಗೊಳಿಸಿದ ಈ ಸುಸಂದರ್ಭದಲ್ಲಿ ಅನುಪಮ ಬಳಗವು ವಿಶೇಷಾಂಕವೊಂದನ್ನು ಹೊರ ತಂದಿದೆ. ಈ ವಿಶೇಷಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದಾರೆ ಎಂದು ಶಹನಾಝ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅನುಪಮ ಉಪ ಸಂಪಾದಕಿ ಸಬೀಹಾ ಫಾತಿಮಾ, ಸಂಪಾದಕ ಮಂಡಳಿಯ ಸಮೀನಾ ಯು, ಸಾಜಿದಾ ಮೂಮಿನ್, ಕರಾವಳಿ ಲೇಖಕಿ-ವಾಚಕಿಯರ ಸಂಘದ ಸದಸ್ಯೆ ಸುಖಾಲಾಕ್ಷಿ, ಹಿದಾಯ ಫೌಂಡೇಶನ್ ಅಧ್ಯಕ್ಷೆ ಖುರ್ಷಿದಾ ಹಾಗೂ ಮುಝಾಹಿರ ಸಾಮಾಜಿಕ ಕಾರ್ಯಕರ್ತೆ ಹರಿಣಿ ಕೆ. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article