ಶಾಸಕ ಕಾಮತ್ ಉಪಸ್ಥಿತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ
Wednesday, January 14, 2026
ಮಂಗಳೂರು: ಮ.ನ.ಪಾ ವ್ಯಾಪ್ತಿಯ ಪಡೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಚಿಕಿತ್ಸೆಗಾಗಿ ಇಲ್ಲಿ ಬರುವ ಎಲ್ಲಾ ರೋಗಿಗಳಿಗೆ ಉತ್ತಮ ಸೌಲಭ್ಯ ನೀಡುವಂತಾಗಲು ನೂತನ ಕೊಠಡಿ ಹಾಗೂ ಸುಸಜ್ಜಿತ ಮೇಲ್ಚಾವಣಿಯನ್ನು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಸಹಾಯದಿಂದ ನಿರ್ಮಿಸಲಾಗಿದ್ದು ಸ್ಥಳೀಯ ನಿವಾಸಿ ಹಾಗೂ ನನ್ನ ಶಾಲಾ ದಿನಗಳ ಶಿಕ್ಷಕಿ ಲತಾ ಟೀಚರ್ ರವರು ಉದ್ಘಾಟನೆಗೊಳಿಸಿರುವುದು ಅತ್ಯಂತ ಸಂತೋಷ ತಂದಿದೆ. ಅಳಪೆ, ಕಣ್ಣೂರು, ಮರೋಳಿ, ಬಜಾಲ್, ಶಕ್ತಿನಗರ, ಕುಲಶೇಖರ, ಹೀಗೆ ಆರು ವಾರ್ಡ್ ಗಳ ಸುಮಾರು ಮೂವತ್ತರಿಂದ ನಲುವತ್ತು ಸಾವಿರ ಜನರಿಗೆ ಈ ಆರೋಗ್ಯ ಕೇಂದ್ರ ಉಪಯೋಗವಾಗಲಿದೆ. ನಮ್ಮ ಬೇಡಿಕೆಗೆ ಸ್ಪಂದಿಸಿ ಇಲ್ಲಿಗೆ ಅಗತ್ಯವಿರುವ ಟೇಬಲ್, ಕುರ್ಚಿ ನೀಡಿದ ಎಂ.ಆರ್.ಪಿ.ಎಲ್ ಸಂಸ್ಥೆಗೆ ವಿಶೇಷ ಧನ್ಯವಾದಗಳು. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಇನ್ನಷ್ಟು ಸಹಕಾರ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಮೂರು ನಾಲ್ಕು ತಿಂಗಳಿನಿಂದ ವೇತನವಿಲ್ಲದೇ ಹಗಲಿರುಳು ದುಡಿಯುತ್ತಿರುವ ಹೊರಗುತ್ತಿಗೆ ಆಧಾರದ ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರ ಪರಿಸ್ಥಿತಿ ಅತ್ಯಂತ ಶೋಚನೀಯವಾಗುತ್ತಿದೆ. ಪ್ರಾಮಾಣಿಕವಾಗಿ ಮಾಡಿದ ಕೆಲಸಕ್ಕೂ ವೇತನವಿಲ್ಲ ಎಂದರೆ ಏನರ್ಥ? ಆಳುವ ಸರ್ಕಾರಕ್ಕೆ ಕನಿಷ್ಠ ಮಾನವೀಯತೆಯಾದರೂ ಇರಬೇಕು. ನಮ್ಮದೇ ಜಿಲ್ಲೆಯ ಉಸ್ತುವಾರಿ ಸಚಿವರು ಆರೋಗ್ಯ ಮಂತ್ರಿಗಳಾಗಿದ್ದರೂ ಇಂತಹ ದೌರ್ಭಾಗ್ಯ ಬಂದಿರುವುದು ದುರಂತ ಎಂದರು.
ನಿಕಟ ಪೂರ್ವ ಪಾಲಿಕೆ ಸದಸ್ಯರಾದ ರೂಪಶ್ರೀ ಪೂಜಾರಿ, ಚಂದ್ರಾವತಿ ವಿಶ್ವನಾಥ್, ಶೋಭಾ ಪೂಜಾರಿ, ಕಿಶೋರ್ ಕೊಟ್ಟಾರಿ, ಬಿಜೆಪಿ ಪ್ರಮುಖರಾದ ಚಂದ್ರಶೇಖರ ಬಜಾಲ್, ಸುಕೇಶ್, ರಾಮ್ ಪ್ರಸಾದ್, ಅಶ್ವಿತ್ ಕೊಟ್ಟಾರಿ, ಪ್ರವೀಣ್ ನಿಡ್ಡೆಲ್, ಆಶಾ ಮರೋಳಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.


