‘ಕನ್ನಡ ಪಯಸ್ವಿನಿ ಅವಾರ್ಡ್-2026’ಗೆ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಆಯ್ಕೆ
ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷ ಕ್ರೀಡಾ ಬರವಣಿಗೆ ಹಾಗೂ ಕ್ರೀಡಾ ಅಂಕಣಕಾರರಾಗಿ ಗುರುತಿಸಿಕೊಂಡಿರುವ ಎಸ್. ಜಗದೀಶ್ಚಂದ್ರ ಅಂಚನ್ ಇದುವರೆಗೆ ಸುಮಾರು 4500ಕ್ಕೂ ಹೆಚ್ಚು ಕ್ರೀಡಾ ಲೇಖನ/ಅಂಕಣ ಬರಹಗಳನ್ನು ಬರೆದಿದ್ದು, ಇದು ಜಿಲ್ಲೆ, ರಾಜ್ಯ, ಅಂತರ್ ರಾಜ್ಯ ಮಟ್ಟದ ವಿವಿಧ ದಿನ ಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.
ಮುಖ್ಯವಾಗಿ ಕೇರಳದ ಕೊಟ್ಟಾಯಂನಿಂದ ಪ್ರಕಟಗೊಳ್ಳುತ್ತಿದ್ದ ‘ಮಂಗಳ’ ವಾರ ಪತ್ರಿಕೆಯಲ್ಲಿ ಇವರು ಸುಮಾರು 15 ವರ್ಷ ಕ್ರೀಡಾ ಅಂಕಣವನ್ನು ಬರೆದು ಜನಪ್ರಿಯತೆ ಗಳಿಸಿರುತ್ತಾರೆ.
ಮಾಧ್ಯಮ ಕ್ಷೇತ್ರದಲ್ಲಿ ಕ್ರೀಡಾ ವಿಮರ್ಶಾತ್ಮಕ ಲೇಖನಗಳ ಮೂಲಕ ಗುರುತಿಸಿಕೊಂಡು ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಇವರಿಗೆ ಜ.18 ರಂದು ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ನಡೆಯುವ ಕನ್ನಡ ಭವನ ರಜತ ಸಂಭ್ರಮ-ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.