ಜ.24-25 ರಂದು ಜಪ್ಪು ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದ 67ನೇ ವರ್ಷದ ಸಂಭ್ರಮಾಚರಣೆ
ಮಂಗಳೂರು: ಜಪ್ಪು ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದ 67ನೇ ವರ್ಷದ ಸಂಭ್ರಮಾಚರಣೆ ಜ.24 ಮತ್ತು 25 ರಂದು ಸಂತ ರೀಟಾ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಲಿದೆ.
ಜ.24 ರಂದು ಸಂಜೆ 6ಕ್ಕೆ ಕಾಸ್ಸಿಯಾ ಹೈಸ್ಕೂಲಿನಿಂದ ಹೊರಡುವ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಕಾಸ್ಸಿಯಾ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ಫಾ. ಎರಿಕ್ ಕ್ರಾಸ್ತಾ ಆಶೀರ್ವಚನ ನೀಡಲಿದ್ದಾರೆ. ಕರಾವಳಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂಸಿಸಿ ಬ್ಯಾಂಕ್‌ನ ಚೇರ್‌ಮೆನ್ ಅನಿಲ್ ಲೋಬೊ, ಮೆಸ್ಕಾಂ ಮಂಗಳೂರು ವಲಯದ ನಿಯಂತ್ರಣಾಽಕಾರಿ ಎ. ಉಮೇಶ್ ಗಟ್ಟಿ, ಉದ್ಯಮಿ ದಿಲ್‌ರಾಜ್ ಆಳ್ವ, ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಬಂಗೇರ ಭಾಗವಹಿಸುವರು ಎಂದು ಸಂಘದ ಉಪಾಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುರುವಂದನಾ ಕಾರ್ಯಕ್ರಮದಲ್ಲಿ ಕಾಸ್ಸಿಯಾ ಪ್ರೌಢಶಾಲೆಯಲ್ಲಿ ಸೇವೆಗೈದು, ನಿವೃತ್ತಿ ಹೊಂದಿದ ಅಧ್ಯಾಪಕರಾದ ಏಂಜಲಿನ್ ಟಿ. ಲೋಬೊ, ಬಿ. ಚಂದ್ರಶೇಖರ್, ರೀಟಾ ರೊಡ್ರಿಗಸ್, ಬ್ರಿಜಿತ್ ಎಲಿಝಾ ಪಿರೇರಾ, ಫ್ಲೋಸಿ ಪಿಂಟೊ, ಗ್ರೇಸಿ ಮರಿಯಾ ಡಿಸೋಜ ಅವರನ್ನು ಸಮ್ಮಾನಿಸಲಾಗುವುದು. ಬಳಿಕ ನೃತ್ಯ ಕಾರ್ಯಕ್ರಮ ಹಾಗೂ ರಾಘು ಮಾಸ್ಟ್ರು ಎಂಬ ಹಾಸ್ಯಮಯ ತುಳು ನಾಟಕ ನಡೆಯಲಿದೆ ಎಂದರು.
ಜ.25 ರಂದು ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದಜಿ ಆಶೀರ್ವಚನ ನೀಡುವರು. ಸಂಘದ ಅಧ್ಯಕ್ಷ ಮಾಧವ ಬಂಗೇರ ಅಧ್ಯಕ್ಷತೆ ವಹಿಸುವರು. ಗಣ್ಯರು ಭಾಗವಹಿಸುವರು. ಹಳೆ ವಿದ್ಯಾರ್ಥಿಗಳಾದ ಶೈಲೇಂದ್ರ, ವಿಮಲಾ ಬಾಯಿ, ಲಕ್ಷ್ಮಣ್ ಮಲ್ಲೂರು, ಪ್ರಶಾಂತ್, ಹಮೀದ್ ಪಾವಳ, ಚಂದ್ರಪ್ಪ ಅವರನ್ನು ಸನ್ಮಾನಿಸಲಾಗುವುದು. ಮನೋರಂಜನಾ ಕಾರ್ಯಕ್ರಮ ಹಾಗೂ ‘ನಿರೆಲ್’ ಹಾಸ್ಯಮಯ ತುಳು ನಾಟಕ ನಡೆಯಲಿದೆ ಎಂದರು.
ಸಂಘದ ಅಧ್ಯಕ್ಷ ಮಾಧವ ಬಂಗೇರ, ಮಾಜಿ ಅಧ್ಯಕ್ಷ ಸುಭಾಸ್ ಬಿ., ಸಂಚಾಲಕ ಅನಿಲ್ ಪಿ.ಎ. ಉಪಸ್ಥಿತರಿದ್ದರು.