ಪುತ್ತೂರು ‘ಮಗು’ ಭಾಗ್ಯ ಪ್ರಕರಣ-ಜ.24 ರಂದು ಮಗುವಿಗೆ ನಾಮಕರಣ: ಪ್ರತಿಭಾ ಕುಳಾಯಿ

ಪುತ್ತೂರು ‘ಮಗು’ ಭಾಗ್ಯ ಪ್ರಕರಣ-ಜ.24 ರಂದು ಮಗುವಿಗೆ ನಾಮಕರಣ: ಪ್ರತಿಭಾ ಕುಳಾಯಿ


ಮಂಗಳೂರು: ಡಿಎನ್‌ಎ ಪರೀಕ್ಷೆಯಲ್ಲಿ ಸಂತ್ರಸ್ತೆ ಪೂಜಾಳ ಮಗುವಿನ ತಂದೆ ಕೃಷ್ಣ ಜೆ.ರಾವ್ ಎಂಬುದು ಸಾಬೀತಾದರೂ ಅವರು ಈಕೆಯನ್ನು ಮದುವೆಯಾಗಲು ಸುತಾರಾಂ ಒಪ್ಪುತ್ತಿಲ್ಲ. ಮಾತ್ರವಲ್ಲ ಲಕ್ಷಗಟ್ಟಲೆ ಪರಿಹಾರ ನೀಡುವುದಾಗಿ ಸಂಧಾನ ಮಾತುಕತೆ ವೇಳೆ ಹೇಳುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಸಂಧಾನ ಬಾಗಿಲು ಮುಚ್ಚಿದ್ದು, ಕೋರ್ಟ್ ನೀಡಿರುವ ಜಾಮೀನನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಲಾಗುವುದು. ಅಲ್ಲದೆ ಸದ್ಯ ಅತಂತ್ರ ಸ್ಥಿತಿಯಲ್ಲಿ ಇರುವ ಮಗುವಿಗೆ ಕಲ್ಲಡ್ಕದಲ್ಲಿ ಜನವರಿ 24ರಂದು ನಾಮಕರಣ ಶಾಸ್ತ್ರ ನೆರವೇರಿಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದ್ದಾರೆ.

ಮಂಗಳೂರಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸಂತ್ರಸ್ತೆಯ ತಾಯಿ ಹಾಗೂ ಮಗು ಸಹಿತ ಸಂತ್ರಸ್ತೆ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗುವಿನ ತಂದೆ  ಕೃಷ್ಣ ಜೆ.ರಾವ್ ಎಂಬುದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾದರೂ ಆತನ ಕುಟುಂಬದವರು ಪೂಜಾ ಜೊತೆ ಮದುವೆಗೆ ಸುತಾರಾಂ ಒಪ್ಪುತ್ತಿಲ್ಲ. ಕೇವಲ ವಿಶ್ವಕರ್ಮ  ಸಮುದಾಯದ ಮುಖಂಡ ಕೆ.ಪಿ. ನಂಜುಂಡಿ ಜೊತೆ ಮಾತ್ರ ಸಂಪರ್ಕದಲ್ಲಿ ಇದ್ದಾರೆ. ಮದುವೆ ವಿಚಾರದಲ್ಲಿ ಸಂಧಾನ ಮಾತುಕತೆ ವೇಳೆ ಆತನ ಪೋಷಕರು  ಈಡೇರಿಸಲಾಗದ ಷರತ್ತು ಇಟ್ಟಿದ್ದಾರೆ. ಮಗುವನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಬೇಕು. ಹಾಗಾದರೆ ಮಾತ್ರ ಪೂಜಾಳವನ್ನು ಆತ ವಿವಾಹವಾಗಿ ವಿಚ್ಛೇದನ ನೀಡುತ್ತಾನಂತೆ. ಅಲ್ಲದೆ ಈ ವೇಳೆ 50 ಲಕ್ಷ ರೂ. ಪರಿಹಾರ ನೀಡುತ್ತಾನಂತೆ, ಮೊದಲಿನ ಕೇಸ್‌ನ್ನೆಲ್ಲ ವಾಪಸ್ ಪಡೆಯಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಿದ್ದಾರೆ. ನಮಗೆ ಹಣ  ಬೇಡ, ಸಾಮಾಜಿಕ ನ್ಯಾಯ ಬೇಕು. ಹಾಗಾದರೆ ಪೂಜಾಳನ್ನು ವಿವಾಹವಾದರೆ ನಾನೇ ಅವನಿಗೆ 50 ಲಕ್ಷ ರೂ. ಕೊಡುತ್ತೇನೆ ಎಂದು ಸವಾಲು ಹಾಕಿದರು.

ಜ.24ರಂದು ಕಲ್ಲಡ್ಕದಲ್ಲಿ ನಾಮಕರಣ:

ಕರಾವಳಿಯಲ್ಲಿ ಹಿಂದು ಸಮಾಜದ ಬಗ್ಗೆ ಮುಖಂಡರು, ರಾಜಕೀಯ ನೇತಾರರು ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಾರೆಯೇ ವಿನಃ ಇಂತಹ ಸನ್ನಿವೇಶದಲ್ಲಿ ಸಿಲುಕಿದವರನ್ನು  ಪಾರು ಮಾಡುವ ಬಗ್ಗೆ ನೆರವಿಗೆ ಧಾವಿಸುತ್ತಿಲ್ಲ. ಹಾಗಾಗಿ ನಾವು ಬೇರೆ ಸಮುದಾಯದವರನ್ನೂ ಧ್ವನಿ ಎತ್ತಲು ಆಹ್ವಾನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಂಘಟನಾತ್ಮಕವಾಗಿ ಶಕ್ತಿ ಕೇಂದ್ರ ಆಗಿರುವ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ಊರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇನೆ. ಇದೇ ಕಾರಣಕ್ಕೆ ಜನವರಿ 24 ರಂದು ಕಲ್ಲಡ್ಕದಲ್ಲೇ ಮಗುವಿಗೆ ನಾಮಕರಣ ಶಾಸ್ತ್ರ ನೆರವೇರಿಸುವುದಾಗಿ ಪ್ರತಿಭಾ ಕುಳಾಯಿ ಹೇಳಿದರು. 

ಯಾವ ಕಾರಣಕ್ಕೆ ಪೂಜಾ ಬೇಡ?:

ಮಗುವಿನ ತಂದೆ ಕೃಷ್ಣ ಜೆ.ರಾವ್ ಯಾವ ಕಾರಣಕ್ಕೆ ಪೂಜಾಳನ್ನು ತಿರಸ್ಕರಿಸುತ್ತಿದ್ದಾನೆ ಎಂದು ಅರ್ಥವಾಗುತ್ತಿಲ್ಲ. ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸಿ ಅರ್ಥಮಾಡಿಕೊಂಡಿದ್ದ ಇವರಿಬ್ಬರು ಸರಸದಲ್ಲಿ ಮಗು ಜನಿಸಿದ ಬಳಿಕ ಮತ್ತೆ ಆಕೆಯನ್ನು ದೂರ ಮಾಡುವುದರಲ್ಲಿ ಅರ್ಥ ಇಲ್ಲ. ಆಕೆ ಯಾವುದೇ ಕಾರಣಕ್ಕೂ ಅಬಲೆ  ಅಲ್ಲ, ಆಕೆಯೂ ನಿತ್ಯವೂ ನೊಂದುಕೊಳ್ಳುತ್ತಿದ್ದು, ಆತ್ಮಹತ್ಯೆಗೂ ಯೋಚಿಸಿದ್ದಾಳೆ. ಅವಳ ಬದುಕಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತಿದ್ದು, ಮುಂದೆ ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿ ಮುಂದುವರಿಯುತ್ತೇವೆ ಎಂದು ಪ್ರತಿಭಾ ಕುಳಾಯಿ ಹೇಳಿದರು.

ಪುತ್ತಿಲ ಪೂಜಾ ಕಲ್ಯಾಣ ಮಾಡಿಸಲಿ:


ಪುತ್ತೂರಿನಲ್ಲಿ ಹಿಂದು ನಾಯಕ ಎನಿಸಿದ ಅರುಣ್ ಕುಮಾರ್ ಪುತ್ತಿಲ ಅವರು ಶ್ರೀನಿವಾಸ ದೇವರಿಗೆ ಕಲ್ಯಾಣ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಶ್ರೀನಿವಾಸ ದೇವರಿಗೆ  ಯಾವಾಗಲೋ ಕಲ್ಯಾಣ ಆಗಿದೆ. ಈಗ ಆಗಬೇಕಾಗಿರುವುದು ಪೂಜಾಳಿಗೆ. ಅವಳಿಗೆ ಕೃಷ್ಣ ಜೆ.ರಾವ್ ಜೊತೆ ಕಲ್ಯಾಣ ಮಾಡಿಸುವ ಬಗ್ಗೆ ಪುತ್ತಿಲ ಮನಸ್ಸು ಮಾಡಲಿ ಎಂದು ಗೌರವಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದು ಪ್ರತಿಭಾ ಕುಳಾಯಿ ಹೇಳಿದರು.



ನಾನು ತಪ್ಪು ಮಾಡಿದ್ದೇನೆ. ಹೇಗೂ ತಪ್ಪಾಗಿ ಹೋಗಿದೆ. ಈಗ ಮಗುವಿನ ತಂದೆ ಯಾರು ಎಂದು ಯಾರಾದರೂ ಕೇಳಿದರೆ ನಾನು ಏನೆಂದು ಹೇಳಲಿ, ಅದನ್ನು ನೆನೆಸುವಾಗ ಸಾಯುವ ಎಂದಾಗುತ್ತಿದೆ ಎಂದು ಸಂತ್ರಸ್ತೆ ಪೂಜಾ ಹೇಳುತ್ತಾರೆ.



ನನ್ನ ಮಗಳಿಂದ ತಪ್ಪಾಗಿದೆ, ಆತನೂ ತಪ್ಪು ಮಾಡಿದ್ದಾನೆ. ಇದು ಅವರದೇ ಮಗು ಎಂಬುದು ಡಿಎನ್‌ಎ ಪರೀಕ್ಷೆಯಲ್ಲೂ ಸಾಬೀತಾಗಿದೆ. ನಮಗೆ ನ್ಯಾಯ ಕೊಡಿಸಿ,  ನ್ಯಾಯ ಬೇಕು. ಆತ ಪೂಜಾಳನ್ನು ಮದುವೆ ಆಗಿ ಒಳ್ಳೆಯದರಲ್ಲಿ ಸಂಸಾರ ನಡೆಸಬೇಕು ಎಂದು ಸಂತ್ರಸ್ತೆಯ ತಾಯಿ ನಮಿತಾ ಹೇಳುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article