ಜ.31 ರಂದು ಪ್ರೊ ಆಮ್ ಗಾಲ್ಫ್ ಟೂರ್ನಮೆಂಟ್: ಮನೋಜ್ ಶೆಟ್ಟಿ

ಜ.31 ರಂದು ಪ್ರೊ ಆಮ್ ಗಾಲ್ಫ್ ಟೂರ್ನಮೆಂಟ್: ಮನೋಜ್ ಶೆಟ್ಟಿ

ಮಂಗಳೂರು: ಪ್ಲಡ್ ಲೈಟಿಂಗ್ ವ್ಯವಸ್ಥೆಯೊಂದಿಗೆ 18 ಹೋಲ್‌ಗಳೊಂದಿಗೆ ವಿಶ್ವದರ್ಜೆಯ ಗಾಲ್ಫ್ ಕೋರ್ಸ್ ಆಗಿ ಪರಿತರ್ವನೆಗೊಂಡಿರುವ ಪಿಲಿಕುಳದ ಗಾಲ್ಫ್ ಕೋರ್ಸ್‌ನಲ್ಲಿ ಜ.31 ರಂದು ಪ್ರೊಆಮ್ ಗಾಲ್ಫ್ ಟೂರ್ನಮೆಂಟ್ ನಡೆಯಲಿದೆ ಎಂದು ಪಿಲಿಕುಳ ಗಾಲ್ಫ್ ಕ್ಲಬ್‌ನ ಕ್ಯಾಪ್ಟನ್ ಮನೋಜ್ ಶೆಟ್ಟಿ ಹೇಳಿದರು.

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ, ವಿಶ್ವಮಟ್ಟದ ಕೋರ್ಸ್ ಸಿದ್ಧತೆ ಮತ್ತು ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯೊಂದಿಗೆ ಪಿಲಿಕುಳ ಗಾಲ್ಫ್ ಕ್ಲಬ್ ಭಾರತೀಯ ಗಾಲ್ಫ್ ಕ್ರೀಡೆಯಲ್ಲಿ ನವೀನತೆ ಮತ್ತು ಸ್ಪರ್ಧಾತ್ಮಕ ಶ್ರೇಷ್ಟತೆಯನ್ನು ಒಟ್ಟುಗೂಡಿಸಿ ಹೊಸ ಅಧ್ಯಾಯ ಆರಂಭಿಸಲಿದೆ ಎಂದರು.

ಪಿಲಿಕುಳ ಗಾಲ್ಫ್ ಕ್ಲಬ್ ಆತಿಥ್ಯಿದಲ್ಲಿ ನಡೆಯಲಿರುವ ಈ ಹೊನಲು ಬೆಳಕಿನ ಪಂದ್ಯಾಟದಲ್ಲಿ ವೃತ್ತಿಪರ ಗಾಲ್ಫರ್‌ಗಳು ಹಾಗೂ ಅಮೆಚ್ಯೂರ್ ಆಟಗಾರರು ಒಂದೇ ವೇದಿಕೆಯಲ್ಲಿ ಸ್ಪರ್ಧಿಸಲಿದ್ದಾರೆ. ಈಗಾಗಲೇ ಭಾರತದ 12 ವೃತ್ತಿಪರ ಗಾಲ್ಫರ್‌ಗಳು ತಮ್ಮ ಭಾಗವಹಿಸುವಿಕೆಯನ್ನು ದೃಪಡಿಸಿದ್ದಾರೆ ಎಂದವರು ಹೇಳಿದರು.

ಸ್ಪರ್ಧೆಯನ್ನು ಮೀರಿ ಈ ಟೂರ್ನಮೆಂಟ್ ಕರಾವಳಿ ಕರ್ನಾಟಕದಲ್ಲಿ ಗಾಲ್ಫ್ ಕ್ರೀಡೆಯ ಬೆಳವಣಿಗೆಗೆ ಪಿಲಿಕುಳ ಗಾಲ್ಫ್ ಕ್ವಬ್‌ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಮಂಗಳೂರನ್ನು ಪ್ರಗತಿಶೀಲ ಕ್ರೀಡಾ ತಾಣವಾಗಿ ಉತ್ತೇಜಿಸುತ್ತದೆ ಎಂದರು.

ನವೀಕೃತ ಗಾಲ್ಫ್ ಕೋರ್ಸ್ ಉದ್ಘಾಟನೆ ಗೊಂದಲ:

ಪಿಲಿಕುಳದಲ್ಲಿ ನವೀಕೃತಗೊಂಡಿರುವ ಗಾಲ್ಫ್ ಕೋರ್ಸ್‌ನ ಉದ್ಘಾಟನೆ ಜ.9ರಂದು ನಿಗದಿಯಾಗಿದ್ದು, ಇದೀಗ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜ.10ರಂದು ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಅವರಿಂದ ಗಾಲ್ಫ್ ಕೋರ್ಸ್ ಉದ್ಘಾಟನೆಗೆ ಪ್ರಯತ್ನ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಅವರ ನಿರ್ದೇಶನದ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ವಿಶ್ವದರ್ಜೆಯ ಗಾಲ್ಫ್ ಅಕಾಡೆಮಿ ಸ್ಥಾಪನೆಗೆ ತಯಾರಿ:

ಗಾಲ್ಫ್ ಕ್ರೀಡೆಗೆ ಯುವಕರನ್ನು ಮತ್ತಷ್ಟು ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಅಕಾಡೆಮಿಯ ಸದಸ್ಯ ಮೈಕಲ್ ಡಿಸೋಜಾ ಅವರ ಪ್ರಾಯೋಜಕತ್ವದಲ್ಲಿ ಮೂರು ತಿಂಗಳೊಳಗೆ ವಿಶ್ವದರ್ಜೆಯ ಅತ್ಯುನ್ನತ ಗಾಲ್ಫ್ ಅಕಾಡೆಮಿ ಸ್ಥಾಪನೆಗೆ ಪ್ರಯತ್ನ ನಡೆದಿದೆ. ಭಾರತದ 3ನೇ ವಿಶ್ವದರ್ಜೆಯ ಗಾಲ್ಫ್ ಕೋರ್ಸ್ ಪಿಲಿಕುಳದ್ದಾಗಿದ್ದು, ಸುಮಾರು 60 ಎಕರೆ ಜಾಗದಲ್ಲಿ ಹಚ್ಚ ಹಸಿರಿನ ಹೊದಿಕೆಯೊಂದಿಗೆ ಗಾಲ್ಫ್ ಕೋರ್ಸ್ ರೂಪಗೊಂಡಿದೆ. ವಿಶ್ವ ಮಟ್ಟದ ಟೊರೊ ನೀರಾವರಿ ವ್ಯವಸ್ಥೆಯನ್ನು ಮಾಡಲಾಗಿದೆ. 4.2 ಕಿ.ಮೀ. ಕಾರ್ಟ್ ಪಾತ್‌ನಲ್ಲಿ ಓಡಾಡಲು 10 ವಿದ್ಯುತ್ ಬಗ್ಗೀಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕ್ಲಬ್‌ನ ಹೊರಾಂಗಣದಲ್ಲಿ ಶುಭ ಸಮಾರಂಭಗಳಿಗೆ 20,000 ಚದರ ಅಡಿ ವಿಸ್ತೀರ್ಣದ ಹಚ್ಚ ಹಸಿರಿನ ಸ್ಥಳವನ್ನು ಹೊಂದಿದೆ. ಗಾಲ್ಫ್ ಆಟಗಾರರ ಬಳಕೆಗಾಗಿ ಕ್ಲಬ್ 10 ಸುಸಜ್ಜಿತ ಕೊಠಡಿಗಳನ್ನು ಹೊಂದಿದೆ. ಸುತ್ತ 146 ಬಗೆಯ ಮಾವಿನ ಗಿಡಗಳನ್ನು ನೆಡಲಾಗಿದೆ ಎಂದು ಮನೋಜ್ ಶೆಟ್ಟಿ ತಿಳಿಸಿದರು.

ಗಿರೀಶ್ ರಾವ್, ನಿತಿನ್ ಶೆಟ್ಟಿ, ಗೌತಮ್ ಪಡಿವಾಳ, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article