ಜ.31ರಿಂದ ‘ಕೆಎಂಸಿ ಕ್ಯಾನ್ಸರ್ ಕಾನ್ ಕ್ಲೇವ್’
ಮಂಗಳೂರು: ಕೆಎಂಸಿ ಮಂಗಳೂರು ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಇದರ ಆಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಜಠರ ಕರುಳಿನ ಕ್ಯಾನ್ಸರ್ ಕುರಿತಾದ 2 ದಿನಗಳ ಶೈಕ್ಷಣಿಕ ಸಮ್ಮೇಳನ ‘ಕೆಎಂಸಿ ಕ್ಯಾನ್ಸರ್ ಕಾನ್ ಕ್ಲೇವ್’ ಜ.31 ಹಾಗೂ ಫೆ.1ರಂದು ಅತ್ತಾವರದ ಕೆಎಂಸಿ ಸ್ಪೋಟ್ಸ್ ಹಾಗೂ ಇಂಡೋರ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಲಾಗಿದೆ.
ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ಡಾ.ಎಂ.ಎಸ್.ಅತಿಯಾಮಾನ್, ಜ.31ರಂದು ಪೂರ್ವಾಹ್ನ 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಸಮಾವೇಶದಲ್ಲಿ ಪ್ರಖ್ಯಾತ ಮೆಡಿಕಲ್, ರೇಡಿಯೇಶನ್ ಹಾಗೂ ಸರ್ಜಿಕಲ್ ಆಂಕೋಲಾಜಿಸ್ಟ್ ಗಳು, ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಗಳು, ಪೆಥಾಲಿಸ್ಟ್ ಗಳು, ರೇಡಿಯಾಲಜಿಸ್ಟ್ ಗಳು ಹಾಗೂ ಇತರ ಪ್ರಮುಖರು ಭಾಗವಹಿಸಲಿದ್ದಾರೆ. ಉಪನ್ಯಾಸಗಳು, ಪ್ಯಾನಲ್ ಚರ್ಚೆಗಳು ಹಾಗೂ ಪ್ರಕರಣ ಆಧಾರಿತ ಸಂವಾದ ನಡೆಯಲಿದೆ ಎಂದರು.
ಕ್ಯಾನ್ ವಾಕ್ ಜಾಗೃತಿ ನಡಿಗೆ..
ಸಂಘಟನಾ ಸಮಿತಿ ಕಾರ್ಯದರ್ಶಿ ಡಾ.ಅಭಿಷೇಕ್ ಕೃಷ್ಣ ಅವರು ಮಾತನಾಡಿ, ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಫೆ.1ರಂದು ಬೆಳಗ್ಗೆ 6 ಗಂಟೆಗೆ ‘ಮಂಗಳೂರು ಕ್ಯಾನ್ ವಾಕ್’ ಜಾಗೃತಿ ನಡಿಗೆ ಆಯೋಜಿಸಲಾಗಿದೆ. ಈ ನಡಿಗೆಯಲ್ಲಿ ಕ್ಯಾನ್ಸರ್ ಗೆದ್ದವರು, ಆರೈಕೆದಾರರು, ವೈದ್ಯರು, ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಸೇರಿದಂತೆ ಸುಮಾರು 1300 ಜನರು ಭಾಗವಹಿಸುವ ನಿರೀಕ್ಷೆ ಇದೆ. ಟಿಎಂಎ ಪೈ ಕನ್ವೆನ್ಶನ್ ಸೆಂಟರ್ ನಿಂದ ಪಿವಿಎಸ್, ನವ ಭಾರತ್ ಸರ್ಕಲ್, ಸಿಟಿ ಸೆಂಟರ್, ಹಂಪನಕಟ್ಟೆ, ಕೆಎಂಸಿ ಲೈಟ್ ಹೌಸ್ ಕ್ಯಾಂಪಸ್ ವರೆಗೆ ನಡಿಗೆ ಸಾಗಿಬರಲಿದೆ ಎಂದರು.