ರಸ್ತೆ ಅಪಘಾತ: ಮಹಿಳೆ ಸಾವು
ಮಂಗಳೂರು: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಕೊಕ್ಕರಕಲ್ ಎಂಬಲ್ಲಿ ನಡೆದಿದೆ. ಮೃತರನ್ನು ಚಿತ್ರಾಪು ಮರ್ಕುಂಜ ನಿವಾಸಿ ವನಜಾ ಪುರುಷೋತ್ತಮ ಪೂಜಾರಿ (59) ಎಂದು ಗುರುತಿಸಲಾಗಿದೆ.
ವನಜಾ ಅವರು ಜೆಸಿಂತಾ ಮಚಾದೊ ಎಂಬವರ ಜೊತೆ ಕೊಕ್ಕರಕಲ್ ಸಮೀಪವಿರುವ ಹಾಲು ಸೊಸೈಟಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಬದಿಯಲ್ಲಿದ್ದ ಕಬ್ಬಿಣದ ಸೈಡ್ ಗಾರ್ಡ್‌ಗೆ ಹೊಡೆದು ನಿಂತಿದೆ.
ಅಪಘಾತದ ತೀವ್ರತೆಗೆ ವನಜಾ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಜೊತೆಯಲ್ಲಿದ್ದ ಜೆಸಿಂತಾ ಮಚಾದೊ ಅವರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ವನಜಾ ಅವರು ಪತಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.