ಜ.5 ರಂದು ಪುನರೂರುಗೆ ಪಾತಾಳ ಸ್ಮೃತಿ ಗೌರವ
ಮಂಗಳೂರು: ಪಾತಾಳ ಯಕ್ಷ ಪ್ರತಿಷ್ಠಾನ ವತಿಯಿಂದ ನೀಡುವ ಪಾತಾಳ ಸ್ಮೃತಿ ಗೌರವಕ್ಕೆ ದಾನಿ, ಸಾಹಿತ್ಯ ಪರಿಚಾರಕ, ಕಲಾ ಪೋಷಕ ಹರಿಕೃಷ್ಣ ಪುನರೂರು ಭಾಜನರಾಗಿದ್ದಾರೆ. ಜ.5 ರಂದು ಸಂಜೆ 4ಕ್ಕೆ ಉಪ್ಪಿನಂಗಡಿ ಸನಿಹದ ಪಾತಾಳ ಮನೆಯಲ್ಲಿ ಸ್ಮೃತಿ-ಗೌರವ ಪ್ರದಾನ ಸಮಾರಂಭ ನಡೆಯಲಿದೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾತಾಳ ಯಕ್ಷ ಪ್ರತಿಷ್ಠಾನ ಉಪಾಧ್ಯಕ್ಷ ಅಂಬಾ ಪ್ರಸಾದ್, ಹಿರಿಯ ಸ್ತ್ರೀವೇಷಧಾರಿ ಕೀರ್ತಿಶೇಷ ಪಾತಾಳ ವೆಂಕಟ್ರಮಣ ಭಟ್ ಅವರ ಸ್ಮೃತಿಯಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ವಹಿಸಲಿದ್ದಾರೆ. ಪಾತಾಳರ ಕುರಿತಾದ ನೆನಪು ಹಾಗೂ ಪುನರೂರು ಅವರ ಕುರಿತು ಕರ್ನಾಟಕ ಯಕ್ಷಗಾನ ಅಕಾಡೆಮಿ ಪೂರ್ವಾಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಗೌರವ ನುಡಿಹಾರವನ್ನು ಸಲ್ಲಿಸಲಿದ್ದಾರೆ.
ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಮುಖ್ಯಸ್ಥ ಅರುಣ ಕುಮಾರ್ ಪುತ್ತಿಲ ಅತಿಥಿಯಾಗಿ ಭಾಗವಹಿಸುವರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಶುಭಾಶಂಸನೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗಮಕಿ ಗಣಪತಿ ಪದ್ಯಾಣ ಹಾಗೂ ಸಾಹಿತಿ, ಪ್ರವಚನಗಾರ ಮುಳಿಯ ಶಂಕರ ಭಟ್ ಅವರನ್ನು ‘ಪಾತಾಳ ಸ್ಮೃತಿ ಪುರಸ್ಕಾರ’ ಪ್ರದಾನ ಮಾಡುವ ಮೂಲಕ ಗೌರವಿಸಲಾಗುವುದು.
ಮಧ್ಯಾಹ್ನ ಗಂಟೆ 2ಕ್ಕೆ ‘ಶ್ರೀಕೃಷ್ಣ ಪರಂಧಾಮ’ ಎನ್ನುವ ಆಖ್ಯಾನದ ‘ಕಾವ್ಯ ವಾಚನ’ ನಡೆಯಲಿದೆ. ಕೀರ್ತಿಶೇಷ ಪಾತಾಳ ವೆಂಕಟ್ರಮಣ ಭಟ್ ಅವರು ಸಕ್ರಿಯವಾಗಿರುವಾಗಲೇ ‘ಪಾತಾಳ ಯಕ್ಷ ಪ್ರತಿಷ್ಠಾನ’ವನ್ನು ಸ್ಥಾಪಿಸಿ ಹಲವಾರು ಹಿರಿಯ ಕಲಾವಿದರಿಗೆ ‘ಪಾತಾಳ ಪ್ರಶಸ್ತಿ’ ನೀಡಿದ್ದರು.
ಅವರು 2025ರ ಜುಲೈ 19ರಂದು ನಿಧನರಾಗಿದ್ದು, ಅವರ ಹೆಸರಿನಲ್ಲಿ ನಡೆಯುವ ಮೊದಲ ‘ಸ್ಮೃತಿ ಗೌರವ’ ಸಮಾರಂಭವಿದು. ಎಲ್ಲ ಆಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದರು.
ಪ್ರತಿಷ್ಠಾನ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಕೋಶಾಧಿಕಾರಿ ಶ್ರೀರಾಮ ಭಟ್ ಪಾತಾಳ, ಸದಸ್ಯ ಡಾ.ಮಹಾಲಿಂಗ ಭಟ್ ಇದ್ದರು.