ಜ.9ರಿಂದ ಪಿಲಿಕುಳದಲ್ಲಿ ‘ಹಕ್ಕಿ ಹಬ್ಬ’

ಜ.9ರಿಂದ ಪಿಲಿಕುಳದಲ್ಲಿ ‘ಹಕ್ಕಿ ಹಬ್ಬ’

ಮಂಗಳೂರು: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜ.9 ರಿಂದ 11ರವರೆಗೆ ಪಿಲಿಕುಳ ಕೇಂದ್ರಿತವಾಗಿ ಮಂಗಳೂರಿನಲ್ಲಿ 12ನೇ ಆವೃತ್ತಿಯ ‘ಹಕ್ಕಿ ಹಬ್ಬ’ ಆಯೋಜಿಸಲಾಗಿದೆ.

ಹಲವು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ. ವಿವಿಧ ಪಕ್ಷಿ ಪ್ರಭೇದಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದು ಈ ಹಬ್ಬದ ಮುಖ್ಯ ಉದ್ದೇಶ. ಈ ಹಿಂದೆ 2018ರಲ್ಲಿ ರಮಾನಾಥ ರೈ ಅವರು ಅರಣ್ಯ ಸಚಿವರಾಗಿದ್ದಾಗ ಮಂಗಳೂರಿನಲ್ಲಿ ಹಕ್ಕಿ ಹಬ್ಬ ಆಯೋಜಿಸಲಾಗಿತ್ತು. ಈ ವರ್ಷದ ಉತ್ಸವದ ಉದ್ಘಾಟನೆ ಜ.9ರಂದು ಬೆಳಗ್ಗೆ 11ಕ್ಕೆ ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಭವನದಲ್ಲಿ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗಣ್ಯರು ಭಾಗವಹಿಸಲಿದ್ದಾರೆ. ಈ ವರ್ಷದ ಹಕ್ಕಿ ಹಬ್ಬದ ಲಾಂಛನ ಕರಾವಳಿಯಲ್ಲಿ ಕಂಡುಬರುವ ‘ಬಿಳಿ ಹೊಟ್ಟೆಯ ಕಡಲ ಹದ್ದು’ ಆಗಿರುತ್ತದೆ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಎಸ್. ಮರಿಯಪ್ಪ ಮಾತನಾಡಿ, ಹಕ್ಕಿ ಹಬ್ಬವು ಪಕ್ಷಿ ಪ್ರೇಮಿಗಳಿಗೆ ಮಾಹಿತಿ ಮತ್ತು ಜ್ಞಾನ ವಿನಿಮಯದ ವೇದಿಕೆಯಾಗಿದೆ. ನಗರದ ನಾಲ್ಕು ಕಾಲೇಜುಗಳ 180 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪಕ್ಷಿ ತಜ್ಞರು ಸೇರಿದಂತೆ ಒಟ್ಟು 250 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಿವಿಧ ಪರಿಸರ ವ್ಯವಸ್ಥೆಗಳಲ್ಲಿ ಒಟ್ಟು 12 ಪಕ್ಷಿ ವೀಕ್ಷಣಾ ಪಥಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಪ್ರತಿದಿನ ನಾಲ್ಕು ಪಕ್ಷಿ ವೀಕ್ಷಣಾ ಅವಧಿಗಳಿರುತ್ತವೆ. ಪಾಲ್ಗೊಳ್ಳುವವರನ್ನು 10 ತಂಡಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ತಂಡವು ಗುರುತಿಸಲಾದ ಎಲ್ಲಾ ಪಥಗಳನ್ನು ಸಂದರ್ಶಿಸಲಿದೆ. ಪ್ರತಿ ಅವಧಿಯ ಬಳಿಕ ತಜ್ಞರೊಂದಿಗೆ ಸಂವಾದ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ವಲಸೆ ಹಕ್ಕಿಗಳು ಸೇರಿದಂತೆ ಒಟ್ಟು 450 ಪಕ್ಷಿ ಪ್ರಭೇದಗಳು ದಾಖಲಾಗಿವೆ ಎಂದರು.

ಮಂಡಳಿ ಪುನಶ್ಚೇತನ..

ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಶಾಲೆಗಳಲ್ಲಿ ಹಾವು ಕಡಿತ ತಡೆಗಟ್ಟುವಿಕೆ, ಹಾವುಗಳ ಸಂರಕ್ಷಣೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ಪುನಶ್ಚೇತನಗೊಳಿಸಲು ಬಯಸಿದ್ದೇನೆ. ಪ್ರಸ್ತುತ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಚಾರಣ ಪಥಗಳನ್ನು ಮತ್ತೆ ಮಂಡಳಿಯ ವ್ಯಾಪ್ತಿಗೆ ತರುವ ಉದ್ದೇಶವಿದೆ. ರಾಜ್ಯದ ೪೦ ಚಾರಣ ಪಥಗಳಲ್ಲಿ ಆರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ ಎಂದು ತಿಳಿಸಿದರು.

ಮಂಡಳಿಯ ಪ್ರಕೃತಿ ತಜ್ಞ ರಾಹುಲ್, ಸಿಬ್ಬಂದಿ ಲಾವಣ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article