ಅಡಿಕೆ ಭಾಧಿಸುತ್ತಿರುವ ಎಲೆಚುಕ್ಕಿ ರೋಗ
ಈ ಭಾಗದ ಬಹುಪಾಲು ಅಡಿಕೆ ತೋಟಗಳಲ್ಲಿ ಈ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಒಂದು ಅಡಿಕೆ ಗಿಡದಲ್ಲಿ ಈ ರೋಗ ಕಾಣಿಸಿಕೊಂಡಲ್ಲಿ, ಕೆಲವೇ ದಿನಗಳಲ್ಲಿ ಈ ರೋಗ ಆ ತೋಟದಲ್ಲಿರುವ ಎಲ್ಲಾ ಮರಗಳಿಗೆ ಪರಸರಿಸಿ ಕೆಲವೇ ದಿನಗಳಲ್ಲಿ ಇಡೀ ತೋಟವೇ ನಾಶವಾಗುತ್ತದೆ. ಮೊದಲಿಗೆ ಗಿಡದ ಎಲೆಗಳಲ್ಲಿ ಚುಕ್ಕಿ ರೂಪದಲ್ಲಿ ಕಾಣಿಸಿಕೊಳ್ಳುವ ಈ ರೋಗ ಬಳಿಕ ಗಿಡದ ಎಲ್ಲಾ ಎಲೆಗಳನ್ನು ಆವರಿಸಿಕೊಂಡು ಕ್ರಮೇಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಗಿಡ ಸಾಯುತ್ತದೆ. ಗಿಡಗಳ ಎಲೆಗಳು ಹಸಿರಾಗಿ, ಸೊಂಪಾಗಿ ಬೆಳೆದರೆ ಮಾತ್ರವೇ ಗಿಡವೂ ಬದುಕುಳಿಯಲು ಸಾಧ್ಯವಾಗಿದ್ದು, ಎಲೆಚುಕ್ಕಿ ರೋಗಕ್ಕೆ ಒಳಗಾದ ಗಿಡಗಳು ಇದೇ ಕಾರಣಕ್ಕೆ ಸಾಯುತ್ತದೆ. ಬ್ಯಾಕ್ಟೀರಿಯಾ, ಫಂಗಸ್ ಗಳಿಂದ ಈ ರೋಗ ಸಾಮಾನ್ಯವಾಗಿ ಕಂಡುಬರುತ್ತಿದ್ದರೂ, ಈ ರೋಗವನ್ನು ಎಲ್ಲಾ ಕಡೆಗೆ ಪಸರಿಸುವ ವಾಹಕವಾಗಿ ಸಣ್ಣದಾದ ಒಂದು ಕೀಟ ಕೆಲಸ ಮಾಡುತ್ತದೆ. ಸೊಳ್ಳೆಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿರುವ ಮತ್ತು ಯಾರ ಕಣ್ಣಿಗೂ ಅಷ್ಟು ಸುಲಭವಾಗಿ ಬೀಳದ ಈ ಕೀಟಗಳು ಒಂದೇ ದಿನದಲ್ಲಿ ತೋಟದಲ್ಲಿದ್ದ ಎಲ್ಲಾ ಅಡಿಕೆ ಗಿಡಗಳಿಗೂ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಹರಡುತ್ತದೆ. ಇದರಿಂದಾಗಿ ಬ್ಯಾಕ್ಟೀರಿಯಾ ಪೀಡಿತವಾದ ಗಿಡಗಳು ಕಾಲಕ್ರಮೇಶ ಸೊರಗಿ ಸಾಯುತ್ತದೆ. ಮೊದಲಿಗೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಆರಂಭವಾಗುತ್ತದೆ. ಆ ಬಳಿಕ ಕೊಂಬೆ ಸಾಯುತ್ತದೆ. ಅದೇ ಪ್ರಕಾರ ಹಿಂಗಾರ ಬಿಟ್ಟ ಗಿಡಗಳಲ್ಲಿ ಈ ರೋಗ ಕಂಡುಬಂದಲ್ಲಿ ಹಿಂಗಾರ ಅಡಿಕೆಯಾಗುವ ಮೊದಲೇ ಒಣಗುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಸಣ್ಣ ಅಡಿಕೆ ಆಗಿದ್ದರೂ, ರೋಗ ಮತ್ತು ಕೀಟಗಳಿಂದಾಗಿ ಈ ಅಡಿಕೆ ನಳ್ಳಿಗಳೂ ಮುಟ್ಟಿದ ತಕ್ಷಣವೇ ಉದುರಲು ಆರಂಭಗೊಳ್ಳುತ್ತದೆ. ಸ್ಪಷ್ಟವಾಗಿ ಸಾಧ್ಯವಾಗದ ಈ ಕೀಟಗಳನ್ನು ನಿಯಂತ್ರಿಸುವುದು ಹರಸಾಹಸದ ಕೆಲಸವಾಗಿದೆ. ಗಿಡಗಳಿಗೆ ಸರಿಯಾದ ಸಮಯಕ್ಕೆ ಔಷಧಿಗಳನ್ನು ಸಿಂಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಅಡಿಕೆ ಕೃಷಿಯೇ ನಾಶವಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಅಡಿಕೆ ರೈತರು ಕೂಡಾ ಆರ್ಥಿಕ ನಷ್ಟದಿಂದ ಹೊರ ಬರಲು ಅಸಾಧ್ಯ.