‘ಮನುಕುಲದ ಏಳಿಗೆಗೆ ಶ್ರಮಿಸೋಣ’: ಡಾ. ಜಯಬಸವಾನಂದ ಸ್ವಾಮೀಜಿ

‘ಮನುಕುಲದ ಏಳಿಗೆಗೆ ಶ್ರಮಿಸೋಣ’: ಡಾ. ಜಯಬಸವಾನಂದ ಸ್ವಾಮೀಜಿ


ಮಂಗಳೂರು: ಶೈಕ್ಷಣಿಕವಾಗಿ ಮುಂದುವರಿದಿರದ ಆ ಕಾಲದಲ್ಲಿ ಸಾಮಾಜಿಕ ಕ್ರಾಂತಿಯನ್ನು ಸೃಷ್ಟಿಸಿದ್ದ ಪ್ರವಾದಿ ಮುಹಮ್ಮದ್ ಅವರ ಆಶಯದಂತೆ ಮನುಕುಲದ ಏಳಿಗೆಗೆ ಶ್ರಮಿಸೋಣ ಎಂದು ಚಿಕ್ಕಮಗಳೂರಿನ ವಿಶ್ವಧರ್ಮ ಪೀಠ ಜಯಬಸವಾನಂದ ತಪೋವನದ ಡಾ. ಜಯಬಸವಾನಂದ ಸ್ವಾಮೀಜಿ ಕರೆ ನೀಡಿದರು.

ಯುನಿವೆಫ್ ಕರ್ನಾಟಕವು ಆರಂಭಿಸಿದ್ದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಗೈದರು.

ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ ಎಂಬ ಕೇಂದ್ರೀಯ ವಿಷಯದಲ್ಲಿ ಶುಕ್ರವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರವಾದಿ ಉತ್ತಮ ಆಡಳಿತಗಾರರಾಗಿದ್ದರು. ಸಾಮಾನ್ಯರಲ್ಲಿ ಅತಿ ಸಾಮಾನ್ಯರಂತೆ ಬದುಕಿದ್ದರು. ಅವರು ಸದಾ ಜಗತ್ತಿಗೆ ಶಾಂತಿಯನ್ನು ಬೋಧಿಸಿದರು. ಮಹಿಳೆಯರಿಗೆ ಸಮಾನ ಸ್ಥಾನಮಾನ ಕೊಟ್ಟಿದ್ದರು. ಮದ್ಯ ಮುಕ್ತ, ಜೂಜು ಮುಕ್ತ, ಬಡ್ಡಿ ರಹಿತ, ಅಪರಾಧ ಮುಕ್ತ ಸಮಾಜವನ್ನು ನಿರ್ಮಿಸಿದ್ದರು. ತಾನು ನುಡಿದಂತೆ ಬದುಕಿನಲ್ಲಿ ಪಾಲಿಸುತ್ತಿದ್ದರು. ಆದರೆ ಈವತ್ತು ಅಂತಹ ಕ್ರಾಂತಿಕಾರಿ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಮುಖ್ಯ ಅತಿಥಿ ಸಿ.ಆರ್.ಐ. ಅಧ್ಯಕ್ಷ ಹಾಗೂ ಪ್ಯಾರಿಷ್ ಧರ್ಮಗುರು ರೆ.ಡಾ.ಡೊಮಿನಿಕ್ ವಾಸ್ ಮಾತನಾಡಿ ತತ್ವಜ್ಞಾನಿ ಗ್ಯಾಬ್ರಿಯೆಲ್ ಮಾರ್ಸೆಲ್ರ ವಾದವನ್ನು ಅನ್ವಯಿಸಿ ಹೇಳುವುದಾದರೆ ಪ್ರಸಕ್ತ ಸಮಾಜ ಕೆಟ್ಟುನಿಂತ ಗಡಿಯಾರದಂತೆ ಇದೆ. ಗಡಿಯಾರ ಹೊರಗೆ ನೋಡಲು ಚಂದ ಕಂಡರೂ ಕೆಲಸ ಮಾತ್ರ ಶೂನ್ಯ. ಸಾವಿರಾರು ಕಿಲೊಮೀಟರ್ ದೂರವನ್ನು ಕ್ಷಿಪ್ರಗತಿಯಲ್ಲಿ ತಲುಪಬಲ್ಲ ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುತ್ತಿರುವುದನ್ನು ಸನಿಹದಲ್ಲೇ ನೋಡಬಲ್ಲ ಈ ಕಾಲದಲ್ಲಿ ಹೊಂದಾಣಿಕೆಯ ಬದುಕು ಸಾಧ್ಯವಿಲ್ಲ ಎಂಬಂತೆ ವ್ಯವಸ್ಥೆ ಕೆಟ್ಟು ಹೋಗಿದೆ ಎಂದರು. 

ಮಾಜಿ ಸಚಿವ ಬಿ. ರಮಾನಾಥ ರೈ, ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿದರು.

ಜೆಪ್ಪು ಸದ್ಭಾವನಾ ವೇದಿಕೆಯ ಅಧ್ಯಕ್ಷದಿವಾನ್ ಕೇಶವ ಭಟ್, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರಾಡ್ರಿಗಸ್, ರಾಜ್ಯಸಭಾ ಮಾಜಿ ಸದಸ್ಯ ಬಿ.ಇಬ್ರಾಹೀಂ, ಅಭಿಯಾನದ ಸಹ ಸಂಚಾಲಕರಾದ ಸೈಫುದ್ದೀನ್, ಮುಹಮ್ಮದ್ ಆಸಿಫ್ ಕುದ್ರೋಳಿ ಉಪಸ್ಥಿತರಿದ್ದರು. 

ಅಭಿಯಾನದ ಸಂಚಾಲಕ ಯು.ಕೆ. ಖಾಲಿದ್ ಸ್ವಾಗತಿಸಿದರು. ಜುನೈದ್ ಕಿರಾಅತ್ ಪಠಿಸಿದರು. ಅಭಿಯಾನದ ಸಹ ಸಂಚಾಲಕ ಉಬೈದುಲ್ಲಾ ಬಂಟ್ವಾಳ ವಂದಿಸಿದರು. ಹುದೈಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article