ವೀರ ವೆಂಕಟೇಶ ದೇವರ ಸಹಸ್ರ ಕುಂಭಾಭಿಷೇಕ ಸಂಪನ್ನ
Tuesday, January 20, 2026
ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಇದರ ಪ್ರಧಾನ ಶ್ರೀ ವೀರ ವೆಂಕಟೇಶ ದೇವರ ‘ಸಹಸ್ರ ಕುಂಭಾಭಿಷೇಕ’ ಇಂದು ಸಹಸ್ರಾರು ಭಜಕರ ಸಮ್ಮುಖದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೆರವೇರಿತು.
ಪ್ರಾತಃ ಕಾಲ ವಿದ್ವತ್ ವೈದಿಕರಿಂದ ಶ್ರೀದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ಬಳಿಕ ಭವ್ಯವಾಗಿ ನಿರ್ಮಿಸಲಾದ ಕುಂಭಾಭಿಷೇಕ ಮಂಡಲದಲ್ಲಿ 1008 ಬೆಳ್ಳಿ ಹಾಗೂ ತಾಮ್ರ ಕಲಶಗಳನ್ನು ಪ್ರತಿಷ್ಠಾಪಿಸಿ ಬಳಿಕ ಕಾಶೀಮಠಾಧೀಶರ ಅಮೃತ ಹಸ್ತಗಳಿಂದ ಸಹಸ್ರ ಕಲಶಾಭಿಷೇಕ ನಡೆಯಿತು.
ಯಜ್ಞಮಂಟಪದಲ್ಲಿ ಐದು ದಿನಗಳ ಪರ್ಯಂತ ನಡೆದ ಯಜ್ಞ ಮಹಾಪೂರ್ಣಾಹುತಿ ನಡೆದು ಸಾಯಂಕಾಲ ಸ್ವರ್ಣ ಪಲ್ಲಕಿಯಲ್ಲಿ ಶ್ರೀದೇವರ ಹಗಲೋತ್ಸವ ಬಳಿಕ ಸಮಾರಾಧನೆ ನಡೆದವು, ರಾತ್ರಿ ಪೂಜೆ ನಂತರ ಶ್ರೀ ದೇವರ ಪೇಟೆ ಉತ್ಸವ, ಪ್ರಾಕಾರೋತ್ಸವ, ವಸಂತ ಪೂಜೆ ನಡೆಯಿತು.
ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಕೆ. ಗಣೇಶ್ ಕಾಮತ್, ಜಗನ್ನಾಥ್ ಕಾಮತ್ ಹಾಗೂ ದೇಶ ವಿದೇಶಗಳಿಂದ ಆಗಮಿಸಿದ ಭಗವತ್ ಭಕ್ತರು ಪಾಲ್ಗೊಂಡು ಪುನೀತರಾದರು.


