ಜಗತ್ತಿನ ಕಲ್ಯಾಣಕ್ಕಾಗಿ, ಸವಾಲುಗಳ ಮುಕ್ತಿಗೆ ‘ಹಿಂದೂ ರಾಷ್ಟ್ರ’ವೇ ಏಕೈಕ ಪರಿಹಾರ: ಗುರುಪ್ರಸಾದ್ ಗೌಡ
Monday, January 19, 2026
ಮಂಗಳೂರು: ಲವ್ ಜಿಹಾದ್, ಮತಾಂತರ, ದ್ವೇಷ ಭಾಷಣ ಕಾಯ್ದೆ, ಹಿಂದೂಗಳ ಬಂಧನ, ಜನಸಂಖ್ಯಾ ಸ್ಫೋಟ ಮತ್ತು ವಕ್ಫ್ ಕಾಯ್ದೆಯಂತಹ ಗಂಭೀರ ಸವಾಲುಗಳನ್ನು ಎದುರಿಸಲು ಭಾರತವನ್ನು ಸಂವಿಧಾನಬದ್ಧ ‘ಹಿಂದೂ ರಾಷ್ಟ್ರ’ವನ್ನಾಗಿ ಘೋಷಿಸುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಗುರುಪ್ರಸಾದ್ ಗೌಡ ಹೇಳಿದರು.
ಹಿಂದೂಗಳ ಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಕೋಡಿಯಲ್‌ಬೈಲ್‌ನ ಕೂಟಕ್ಕಲ ಆಡಿಟೋರಿಯಂನಲ್ಲಿ ಭಾನುವಾರ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಅಯೋಧ್ಯೆಯ ರಾಮಮಂದಿರದಂತೆ ಹಿಂದೂ ರಾಷ್ಟ್ರದ ಉದಯವೂ ನಿಶ್ಚಿತವಿದೆ. ದೇವಸ್ಥಾನಗಳ ಸರ್ಕಾರೀಕರಣವನ್ನು ಕೊನೆಗಾಣಿಸಿ ಸಾತ್ವಿಕ ಸಮಾಜ ನಿರ್ಮಿಸಲು ರಾಮರಾಜ್ಯದ ಮಾದರಿಯೇ ನಮಗೆ ಬೇಕಾಗಿದೆ. ನಮ್ಮ ಮುಂದೆ ಲವ್ ಜಿಹಾದ್, ಹಲಾಲ್ ಜಿಹಾದ್, ಗೋ ಹತ್ಯೆ, ಹಿಂದೂಗಳ ಹತ್ಯೆ ಈ ರೀತಿಯ ಅನೇಕ ಸಮಸ್ಯೆಗಳು ಇವೆ. ಇದಕ್ಕೆ ಒಂದೇ ಪರಿಹಾರ, ಹಿಂದೂಗಳ ಹಿತವನ್ನು ಕಾಪಾಡುವ ಹಿಂದೂ ರಾಷ್ಟ್ರವೇ ಬೇಕು ಎಂದರು.
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ‘ಹಿಂದೂಗಳು ಜಾತಿ-ಪಂಥ ಮರೆತು ಸಂಘಟಿತರಾಗಬೇಕು. ಕೇವಲ ಭಾಷಣಕ್ಕೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲಿಡಿ. ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರದ ನಿರ್ಮಾಣ ಯಜ್ಞದಲ್ಲಿ ಕೈಜೋಡಿಸಿ’ ಎಂದು ಹೇಳಿದರು.
ಸನಾತನ ಸಂಸ್ಥೆಯ ಲಕ್ಷ್ಮಿ ಪೈ ಮಾತನಾಡಿ, ಯತೋ ಧರ್ಮಸ್ತತೋ ಜಯಃ-ಎಲ್ಲಿ ಧರ್ಮವಿರುತ್ತದೆಯೋ, ಅಲ್ಲಿ ಜಯವಿರುತ್ತದೆ. ಕೇವಲ ಜನ್ಮತಃ ಹಿಂದೂ ಎಂದು ಕರೆಸಿಕೊಳ್ಳುವುದರಲ್ಲಿ ಸಾರ್ಥಕತೆಯಿಲ್ಲ, ನಮ್ಮ ಕರ್ಮ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು. ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಾವು ನಮ್ಮ ಭವ್ಯ ಪರಂಪರೆಯನ್ನೇ ಮರೆಯುತ್ತಿದ್ದೇವೆ. ನಮ್ಮ ಪ್ರತಿಯೊಂದು ಹಬ್ಬ, ಸಂಪ್ರದಾಯ ಮತ್ತು ಉತ್ಸವಗಳ ಹಿಂದೆ ವೈಜ್ಞಾನಿಕವಾದ ಧರ್ಮಶಾಸ್ತ್ರ ಅಡಗಿದೆ. ಈ ಶಾಸ್ತ್ರಗಳನ್ನು ಅರಿತು, ಶ್ರದ್ಧೆಯಿಂದ ಆಚರಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಮತ್ತು ಬೆಳಗಲು ಸಾಧ್ಯ. ಸಂಸ್ಕೃತಿಯನ್ನು ಮರೆತ ಸಮಾಜಕ್ಕೆ ಭವಿಷ್ಯವಿಲ್ಲ, ಆದ್ದರಿಂದ ಸಂಪ್ರದಾಯದ ಹಿಂದಿನ ಸತ್ಯವನ್ನು ತಿಳಿಯೋಣ, ಕರ್ಮನಿಷ್ಠ ಹಿಂದೂಗಳಾಗೋಣ. ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆಯಿಂದ ನಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳೋಣ ಎಂದು ಹೇಳಿದರು.
ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ ನ್ಯಾಯವಾದಿ ಜಯಪ್ರಕಾಶ ಮಾತನಾಡಿ, ಮೆಖಾಲೆ ಶಿಕ್ಷಣ ಪದ್ಧತಿಯಿಂದಾಗಿ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ವಿಷಾದಿಸಿದ ಅವರು, ಧರ್ಮ ರಕ್ಷಣೆ ಎಂಬುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಧರ್ಮಕ್ಕೆ ಧಕ್ಕೆ ಬಂದಾಗ ಮೌನವಾಗಿರದೆ, ಸಂಘಟಿತರಾಗಿ ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಿಸಬೇಕು. ಹಿಂದೂ ವಿರೋಧಿ ಕೃತ್ಯಗಳನ್ನು ತಡೆಯಲು ಕಾನೂನಿನ ಸದುಪಯೋಗ ಪಡೆದುಕೊಳ್ಳುವುದು ಮತ್ತು ಒಗ್ಗಟ್ಟಿನಿಂದ ಹೋರಾಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಡಾ. ಪ್ರಣವ್ ಮಲ್ಯ ಸಮಿತಿಯ ಕಾರ್ಯ ಪರಿಚಯ ಮತ್ತು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಕಾರ್ಯಕ್ರಮವನ್ನು ಸುಧಾ ಮತ್ತು ವನಜಾಕ್ಷಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ 350 ಕ್ಕೂ ಅಧಿಕ ಹಿಂದೂ ಬಾಂಧವರು ಪಾಲ್ಗೊಂಡರು.




