ಸರಕಾರಿ ಜಾಗ ಅತಿಕ್ರಮಿಸಿ ಆವರಣಗೋಡೆ ನಿಮಾ೯ಣ : ದೂರು, ಪೊಲೀಸರಿಂದ ಕ್ರಮ
Monday, January 19, 2026
ಮೂಡುಬಿದಿರೆ: ರಸ್ತೆ ಸಹಿತ ಸರಕಾರಿ ಜಾಗವನ್ನು ಅತಿಕ್ರಮಿಸಿ ಆವರಣ ಗೋಡೆಯನ್ನು ನಿಮಾ೯ಣ ಮಾಡುತ್ತಿರುವುದರಿಂದ ಸಾವ೯ಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ನೀಡಿದ ದೂರಿಗೆ ಸ್ಪಂದಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಂಡ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ತಾಕೋಡೆ ನಿವಾಸಿ ಬೆನೆಡಿಕ್ಟಾ ಎಂಬವರು ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ ಬಳಿಯ ಕೊಟ್ಟಾರಿ ಕಾಂಪೌಂಡ್ ಬಳಿಯಲ್ಲಿರುವ ರಸ್ತೆ ಸಹಿತ ಸರಕಾರಿ ಜಾಗವನ್ನು ಅತಿಕ್ರಮಿಸಿ ಆವರಣಗೋಡೆಯನ್ನು ನಿಮಿ೯ಸುತ್ತಿದ್ದರು. ಅಲ್ಲಿ ರಸ್ತೆ ಅತ್ಯಂತ ಅಗಲ ಕಿರಿದಾಗಿದ್ದು ಇದೀಗ ಅತಿಕ್ರಮಣದಿಂದಾಗಿ ಎರಡು ಫೀಟುಗಳಿಗೂ ಕಡಿಮೆ ಅಗಲವನ್ನು ಹೊಂದಿರುತ್ತದೆ. ಆದುದರಿಂದ ರಸ್ತೆಯ ಅತಿಕ್ರಮಣವನ್ನು ನಿಲ್ಲಿಸುವಂತೆ ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಹಾಗೂ ಇತರ ಸ್ಥಳೀಯರೊಂದಿಗೆ ಠಾಣೆಗೆ ತೆರಳಿ ಸರಕಾರಿ ಜಾಗವನ್ನು ಅತಿಕ್ರಮಣಗೊಳಿಸುವುದನ್ನು ತಡೆಯುವಂತೆ ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ದೂರು ನೀಡಿದ ಸಂದಭ೯ ಸಂಬಂಧಪಟ್ಟ ಅತಿಕ್ರಮಣಕಾರರು ಒಮ್ಮೆ ಕೆಲಸವನ್ನು ನಿಲ್ಲಿಸಿದಂತೆ ಮಾಡಿ ಮತ್ತೆ ಅರ್ಧ ಗಂಟೆಯಲ್ಲಿ ಕೆಲಸವನ್ನು ಮುಂದುವರಿಸಲು ಆರಂಭಿಸಿದಾಗ ತಕ್ಷಣ ನಿರೀಕ್ಷಕರಲ್ಲಿ ವಿಷಯವನ್ನು ತಿಳಿಸಿದಾಗ ಸ್ವತ: ತಾನೇ ಸ್ಥಳಕ್ಕೆ ಆಗಮಿಸಿ ಕಾಮಗಾರಿಯನ್ನು ನಿಲ್ಲಿಸಿದರು.
ಅತಿಕ್ರಮಣದ ಸಂಧರ್ಭದಲ್ಲಿ ಪುರಸಭೆಯಿಂದ ನಿರ್ಮಿಸಲ್ಪಟ್ಟ ಮಳೆ ನೀರು ಹೋಗುತ್ತಿರುವ ಚರಂಡಿಯನ್ನು ಕೂಡ ಅತಿಕ್ರಮಣ ಮಾಡಿ ಶಾಲಾ ವಾಹನಗಳು ಕೂಡ ಚಲಿಸಲು ಸಾಧ್ಯವಾಗದಂತೆ ನಿರ್ಮಿಸುತ್ತಿರುವ ಬಗ್ಗೆ ಕಂಡು ಬಂದಿದೆ.
