ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಪಾಂಡೇಶ್ವರ ಠಾಣೆಯ ಎಎಸ್‌ಐ ಮೃತ್ಯು
Monday, January 12, 2026
ಮಂಗಳೂರು: ತೀವ್ರ ತರದ ಬೆಂಕಿಯ ಸುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಾಂಡೇಶ್ವರ ಠಾಣೆಯ ಎಎಸ್‌ಐ ಹರಿಶ್ಚಂದ್ರ ಬೇರಿಕೆ (57) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಡಿ.28 ರಂದು ಮಂಗಳೂರಿನ ಕೆಪಿಟಿ ಬಳಿಯ ವ್ಯಾಸನಗರದ ಮನೆಯಲ್ಲಿ ತರಗೆಲೆಯನ್ನು ಸುಡುವ ವೇಳೆ ಅವರಿಗೆ ಬೆಂಕಿ ತಗುಲಿತ್ತು. ಈ ಹಿನ್ನೆಲೆ ತೀವ್ರ ಗಾಯಕ್ಕೆ ಒಳಗಾಗಿದ್ದ ಅವರು ಕಳೆದ ಸುಮಾರು ಎರಡು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಕಾವುಗೊಳಿಯವರಾದ ಹರೀಶ್ಚಂದ್ರ ಅವರು ಈ ಮೊದಲು ಬೈಕಂಪಾಡಿಯಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ವ್ಯಾಸ ನಗರದಲ್ಲಿ ಮನೆ ಮಾಡಿ ವಾಸವಾಗಿದ್ದರು.
1993ರ ನವೆಂಬರ್‌ನಲ್ಲಿ ಇಲಾಖೆಗೆ ಸೇರ್ಪಡೆಗೊಂಡಿದ್ದ ಅವರು 33 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.