ದೈವಾರಾಧನೆ, ಪರಂಪರೆ ಪರದೆಯಲ್ಲಿ ತೋರಿಸಬಾರದು ಅನ್ನುವುದು ಸರಿಯಲ್ಲ: ನಟ ಬಾಸುಮ ಕೊಡಗು
ಈ ಮೂಲಕ ಕಾಂತಾರ 1 ಸಿನಿಮಾದಲ್ಲಿ ದೈವಾರಾಧನೆ ತೋರಿಸಿದ್ದು ಸರಿಯೋ ತಪ್ಪೋ ಎಂಬುದರ ಕುರಿತು ಪರೋಕ್ಷವಾಗಿ ಹೆಸರೆತ್ತದೆ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಪರದೆ ಮೇಲೆ ಪರಂಪರೆ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲು ವಿಮರ್ಶೆ ಮಾಡುವ ಮೊದಲು ಅಧ್ಯಯನ ಮಾಡುತ್ತಿದ್ದರು. ಈಗ ಅಧ್ಯಯನ ಕಾಣುತ್ತಿಲ್ಲ, ವಿಮರ್ಶೆ ಎದ್ದು ಕಾಣುತ್ತಿದೆ. ಹಠದಿಂದ ತಪ್ಪು ಹುಡುಕಲಾಗುತ್ತಿದೆ. ಬ್ಯಾನ್ ಮಾಡುವ ಪದ್ಧತಿ ಜಾಸ್ತಿಯಾಗಿದೆ. ಈ ನಿಷೇಧ ಒಡ್ಡುವ ಕ್ರಮ ಬಹಳ ಎಕ್ಸ್ ಟ್ರೀಮ್ ಆದ ಕ್ರಮ’ ಎಂದು ಹೇಳಿದರು.
‘ಎಲ್ಲಿ ಪ್ರದರ್ಶನಗಳು ಜನರ ಮುಂದೆ ಹೋಗುತ್ತವೆಯೋ ಅಲ್ಲೆಲ್ಲಾ ಪರಂಪರೆ ಕಾಣಿಸಿಕೊಳ್ಳುವುದು ಸಹಜ. ಚಲನಚಿತ್ರಗಳಲ್ಲಿ ಆಚಾರ-ಪರಂಪರೆಯನ್ನು ಅಳವಡಿಸಿಕೊಳ್ಳುವಾಗ ವಿಮರ್ಶಾತ್ಮಕ ದೃಷ್ಟಿಕೋನ ಅಗತ್ಯ. ಜನರು ಒಳ್ಳೆಯದನ್ನು ಆರಿಸುವ ಜಾಣ್ಮೆ ತೋರಬೇಕು’ ಎಂದರು.
ಯಕ್ಷಗಾನವನ್ನು ಜಾಹೀರಾತಿನಲ್ಲಿ ಬಳಸವುದಕ್ಕೆ ವಿರೋಧ ವ್ಯಕ್ತ ಪಡಿಸಿದ ಅವರು, ‘ಕಮರ್ಷಿಯಲ್ ಕಾರಣಕ್ಕೆ ಯಕ್ಷಗಾನವನ್ನು ಜಾಹೀರಾತುಗಳಲ್ಲಿ, ವೀಡಿಯೋಗಳಲ್ಲಿ ಬಳಸುವುದು ತಪ್ಪು. ಜೊತೆಗೆ ಪರಂಪರೆಯ ನೆಲೆಗಟ್ಟಿನಲ್ಲಿ ಯಕ್ಷಗಾನ ಪ್ರಯೋಗ ಮಾಡಬೇಕೇ ಹೊರತು ಕಮರ್ಷಿಯಲ್ ಕಾರಣಕ್ಕೆ ಯಕ್ಷಗಾನ ಕ್ರಮಭಂಗ ಮಾಡುವುದು ಸರಿಯಲ್ಲ’ ಎಂದು ಹೇಳಿದರು.
ಈಗಿನ ಕೌಟುಂಬಿಕ ವ್ಯವಸ್ಥೆ ಕುರಿತೂ ಅಭಿಪ್ರಾಯ ವ್ಯಕ್ತ ಪಡಿಸಿದ ಅವರು, ‘ಪಾಶ್ಚಿಮಾತ್ಯ ಸಿನಿಮಾಗಳನ್ನು ಮಕ್ಕಳಿಗೆ ನೋಡದಂತೆ ತಡೆಯುತ್ತೇವೆ. ಆದರೆ ಅವರು ಕೋಣೆಯೊಳಗೆ ತಮ್ಮ ಮೊಬೈಲ್ ನಲ್ಲಿಯೇ ಎಲ್ಲವನ್ನೂ ನೋಡುತ್ತಾರೆ. ನಮಗೆ ಯಾವುದು ಬ್ಯಾನ್ ಮಾಡಬೇಕು ಎಂಬ ಸ್ಪಷ್ಟತೆಯೇ ಇಲ್ಲ. ಅಲ್ಲದೆ ಈಗ ಕೌಟುಂಬಿಕ ಸಿನಿಮಾ ಅನ್ನುವ ಪರಿಕಲ್ಪನೆಯೇ ಸರಿ ಹೋಗುವುದಿಲ್ಲ. ಯಾಕೆಂದರೆ ಎಲ್ಲರ ಅಭಿರುಚಿ ಬೇರೆಯಾಗಿದೆ’ ಎಂದು ಹೇಳಿದರು.
ಟಾಕ್ಸಿಕ್ ಸಿನಿಮಾ ಟೀಸರ್ ಕುರಿತು ಮಾತನಾಡಿದ ಅವರು, ‘ಸಿನಿಮಾದ ಯಾವುದೋ ಒಂದು ಭಾಗ ನೋಡಿ ಇಡೀ ಸಿನಿಮಾ ತಿರಸ್ಕರಿಸಬಾರದು’ ಎಂದರು.
ಶ್ರೀರಾಜ್ ಗುಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.