ಜನಮನ ಸೊರೆಗೊಂಡ ಗಾಳಿಪಟ ಉತ್ಸವ
Tuesday, January 20, 2026
ಮಂಗಳೂರು: ತಣ್ಣೀರುಬಾವಿಯ ಬ್ಲೂಬೇ ಬೀಚ್‌ನಲ್ಲಿ ಕರಾವಳಿ ಉತ್ಸವದ ಅಂಗವಾಗಿ ಎರಡು ದಿನಗಳ ಕಾಲ ಆಯೋಜಿಸಲಾದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಯಶಸ್ವಿಯಾಗಿದ್ದು, ಜನಮನ ರಂಜಿಸಿದೆ.
ನೀಲ ಆಗಸ ದಲ್ಲಿ ಬಣ್ಣಬಣ್ಣದ, ವಿವಿಧ ನಮೂನೆಯ ಚುಕ್ಕಿಯಾಕಾರದಿಂದ ಹಿಡಿದು ದೈತ್ಯಗಾತ್ರದ ಗಾಳಿಪಟಗಳ ಚಿತ್ತಾರ. ಮೀನು, ಬೆಕ್ಕು, ಆನೆ, ಚಿಟ್ಟೆ, ಮೊಸಳೆ, ಹೂ, ಮಿಕ್ಕಿ, ಏಲಿಯನ್ ... ಹೀಗೆ ವಿವಿಧ ಬಗೆಯ ವಿವಿಧ ವಿನ್ಯಾಸ ಬಣ್ಣಗಳ ಸಂಗಮದ ಗಾಳಿಪಟಗಳು. ಇನ್ನು ಕಡಲ ಕಿನಾರೆಯ ಮರಳಿನ ಮೇಲೆ ಭಾರೀ ಗಾತ್ರದ ಗಾಳಿಪಟಗಳ ಸೂತ್ರವನ್ನು ಸಮತೂಗಿಸಿಕೊಂಡು ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಅಂತಾರಾಷ್ಟ್ರೀಯ ಗಾಳಿಪಟಗಾರರು ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಸಾವಿರಾರು ಸಂಖ್ಯೆಯ ಗಾಳಿಪಟ ಪ್ರೇಮಿಗಳು, ಪ್ರೇಕ್ಷಕರು. ಬೀಚ್‌ನಲ್ಲಿದ್ದರು.
ಟೀಮ್ ಮಂಗಳೂರು ತಂಡದಿಂದ ಎರಡು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ದಲ್ಲಿ 15 ದೇಶಗಳ 30 ಮಂದಿ ಅಂತಾರಾಷ್ಟ್ರೀಯ ಗಾಳಿಪಟಗಾರರ ಜತೆಗೆ 62 ನುರಿತ ಗಾಳಿಪಟ ಹಾರಾಟ ಗಾರರು ತಮ್ಮ ವೈವಿಧ್ಯಮಯ ಗಾಳಿಪಟಗಳನ್ನು ಪ್ರದರ್ಶಿಸಿದ್ದಾರೆ.
ಸಾಂಪ್ರದಾಯಿಕ, ಏರೋಫಾಯಿಲ್, ಇನ್ಪ್ಲೇಟಬಲ್ ಹಾಗೂ ಕ್ಲಾಡ್ ಲೈನ್ ಸ್ಪೋರ್ಟ್ ಗಾಳಿಪಟಗಳ ಜತೆಗೆ ಸ್ಥಳೀಯ ಸಾಂಪ್ರದಾಯಿಕ ಗಾಳಿಪಟಗಳು ಉತ್ಸವದಲ್ಲಿ ನೋಡುಗರನ್ನು ಆಕರ್ಷಿಸಿವೆ.
