‘ಪರಿಶಿಷ್ಟ ಜಾತಿ ಮಾತ್ರವಲ್ಲ ಪರಿಶಿಷ್ಟ ಪಂಗಡಗಳಿಗೂ ಒಳ ಮೀಸಲಾತಿ ಜಾರಿಗೊಳಿಸಬೇಕು’
ನಗರದಲ್ಲಿ ಭಾನುವಾರ ಅವಿಭಜಿತ ದ.ಕ. ಜಿಲ್ಲೆಯ ಪರಿಶಿಷ್ಟ ಪಂಗಡ ಜಾತಿಗಳ ಪ್ರಮುಖರ ಸಭೆ ನಡೆಸಿದ ಬಳಿಕ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ವಿಚಾರದಲ್ಲಿ 2024 ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ನ ಏಳು ಸದಸ್ಯರ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ನೀಡಿತ್ತು. ಈ
ತೀರ್ಪಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಪರಿಶಿಷ್ಟ ಜಾತಿಗಳಿಗೆ ಮಾತ್ರವಲ್ಲ, ಪರಿಶಿಷ್ಟ ಪಂಗಡಗಳಿಗೂ ಅನ್ವಯಿಸಿಯೇ ಈ ತೀರ್ಪು ನೀಡಿದೆ. ಆದರೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳತ್ತ ಮಾತ್ರ ಗಮನ ಹರಿಸುತ್ತಿದೆ ಎಂದು ಅವರು ಆರೋಪಿಸಿದರು.
1994ರಲ್ಲೇ ಕರ್ನಾಟಕ ಸರ್ಕಾರ ಒಬಿಸಿ ಮೀಸಲಾತಿಯಲ್ಲಿ ವರ್ಗೀಕರಣ ಜಾರಿ ಮಾಡಿತು. 2022ರಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿ ಎಸ್ಟಿ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಿತು. ಎಸ್ಸಿಗೆ ಶೇ. 14ರಿಂದ ಶೇ.17 ಹಾಗೂ ಎಸ್ಟಿಗೆ ಶೇ. 3ರಿಂದ ಶೇ. 7ರ ವರೆಗೆ ಏರಿಕೆ ಮಾಡಿತು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನ್ಯಾ. ನಾಗಮೋಹನ ದಾಸ್ ಆಯೋಗದ ಶಿಫಾರಸನ್ನು ಪಡೆದು ಪ.ಜಾತಿಗಳ ನಡುವೆ ವರ್ಗೀಕರಣದ ಸೂತ್ರವನ್ನು ಜಾರಿ ಮಾಡಿದೆ. ಆದರೆ ಎಸ್ಸಿ ಜೊತೆಗೆ ಎಸ್ಟಿ ಮೀಸಲಾತಿಯನ್ನು ಕೈಬಿಟ್ಟಿದೆ ಎಂದರು.
ಭಾರತದಲ್ಲಿ ಪ.ಪಂಗಡಗಳು ಅತ್ಯಂತ ವೈವಿಧ್ಯಮಯ ಸಮುದಾಯವಾಗಿದ್ದು, ದೂರದ ಈಶಾನ್ಯ ರಾಜ್ಯಗಳಿಂದ ತೊಡಗಿ ಕೇರಳ ವರೆಗೆ ಇವರು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಛತ್ತೀಸ್ಗಡದಲ್ಲಿ ಶೇ. 30.6, ಜಾರ್ಖಂಡ್ನಲ್ಲಿ ಶೇ. 26.2, ಮಧ್ಯಪ್ರದೇಶದಲ್ಲಿ ಶೇ. 21.1 ಆದಿವಾಸಿ ಜನಸಾಂದ್ರತೆಯ ರಾಜ್ಯಗಳು ಎಂದು ಗುರುತಿಸಲ್ಪಟ್ಟಿವೆ. ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯ ಸುದೀರ್ಘ ಹೋರಾಟದಿಂದ ಎಸ್ಟಿ ಮೀಸಲಾತಿ ಪಡೆಯಿತು ಎಂದರು.
42.48 ಲಕ್ಷ ಜನಸಂಖ್ಯೆ..
ಕರ್ನಾಟಕದಲ್ಲಿ ಪ. ಪಂಗಡದಲ್ಲಿ ಒಟ್ಟು 50 ಜಾತಿಗಳಿವೆ. 2011ರ ಕೇಂದ್ರ ಸರ್ಕಾರದ ಜನಗಣತಿಯ ಪ್ರಕಾರ ಈ 50 ಜಾತಿಗಳ ಒಟ್ಟು ಜನಸಂಖ್ಯೆ 42.48 ಲಕ್ಷ. ಇದರಲ್ಲಿ ವಾಲ್ಮೀಕಿ ಸಮುದಾಯದವರು 32.96 ಲಕ್ಷದಷ್ಟಿದ್ದಾರೆ. ಉಳಿದ 49 ಜಾತಿಗಳಲ್ಲಿ 9.52 ಲಕ್ಷ ಜನಸಂಖ್ಯೆ ಇದೆ. ಆದಿಯನ್, ಬಾವ್ಚಾ, ಡುಂಗ್ರಿಗರಾಸಿಯಾ, ಚೆಂಚು, ಹಳಪಟ್ಟಿ, ಗೌಡ್ಲು, ಕಣಿಯನ್, ಮಲೆಕುಡಿಯ, ಮಲೇರು, ಪಣಿಯನ್ ಈ ಜಾತಿಗಳ ಜನಸಂಖ್ಯೆ 10 ಸಾವಿರವೂ ಇಲ್ಲ. ಕೆಲವು ಮೂರಂಕೆ ಜನಸಂಖ್ಯೆಯ ಜಾತಿಗಳೂ ಇವೆ. ಎಷ್ಟೋ ಜಾತಿಗಳಲ್ಲಿ ಸರ್ಕಾರಿ ನೌಕರಿ ಎಂಬುದು ಗಗನ ಕುಸುಮವೇ ಆಗಿದೆ. ಕೊರಗ, ಜೇನುಕುರುಬ ಜಾತಿಗಳನ್ನು ಅದರ ಸೂಕ್ಷ್ಮತೆಯ ಕಾರಣಕ್ಕೆ ನೈಜ ದುರ್ಬಲ ಬುಡಕಟ್ಟು ಸಮುದಾಯ ಎಂದು ಗುರುತಿಸಲಾಗುತ್ತಿದೆ. ಎರವ, ಸೋಲಿಗ, ಸಿದ್ದಿ, ಮೇದಾರ, ಮರಾಟಿ ನಾಯ್ಕ, ಹಸಳ, ಹರಿಣಶಿಕಾರಿ ಜಾತಿಗಳಿಗೆ ಸ್ವಲ್ಪ ಸಂಖ್ಯಾ ಬಲ ಇದ್ದರೂ 50 ಸಾವಿರದೊಳಗೆ ಸಂಖ್ಯೆ ಇದೆ. ಹೀಗಿರುವಾಗ ಪ.ಪಂಗಡದಲ್ಲಿ ಪ್ರಬಲರಾಗಿರುವ ವಾಲ್ಮೀಕಿ ಸಮುದಾಯವೇ ಉಳಿದ ಜಾತಿಗಳನ್ನು ತಾಯ್ತನದಿಂದ ಪೊರೆಯಬೇಕಾಗಿದೆ. ಪ.ಪಂಗಡಗಳ ನಡುವೆ ಒಳ ಮೀಸಲು ಹಂಚಿಕೆಯಾದರೆ ಸಣ್ಣ, ಅತೀ ಸಣ್ಣ ಜಾತಿಗಳಿಗೂ ಅವರ ಪಾಲು ದಕ್ಕುತ್ತದೆ ಎಂದರು.
ಸುಪ್ರೀಂ ಕೋರ್ಟ್ ಕೂಡ ತೀರ್ಪಿನಲ್ಲಿ ವರ್ಗೀಕರಣ ಮಾಡುವಾಗ ನಿಖರ ದತ್ತಾಂಶಗಳ ಸಂಗ್ರಹ, ಹಿಂದುಳಿದಿರುವಿಕೆಯ ಅಧ್ಯಯನ ಹಾಗೂ ಸಮಾನರು-ಅಸಮಾನರು ಒಂದೇ ಗುಂಪಿನಲ್ಲಿ ಇರದಂತೆ ಎಚ್ಚರ ವಹಿಸುವಂತೆ ಸೂಚಿಸಿತ್ತು. ಹೀಗಾಗಿ ಈ ಅಂಶಗಳ ಆಧಾರದಲ್ಲಿ ಸರ್ಕಾರ ಅಧ್ಯಯನ ನಡೆಸಿ ವರ್ಗೀಕರಣದ ಸೂತ್ರಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ಪ್ರತ್ಯೇಕ ಆಯೋಗವನ್ನು ತಕ್ಷಣವೇ ರಚಿಸಬೇಕು. ಈ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಲು ಎಲ್ಲ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಮುಖಂಡರಾದ ಡಾ.ಸುಂದರ ನಾಯ್ಕ, ಕಾವೇರ, ಮುತ್ತಪ್ಪ, ಸುಂದರ ನಾಯ್ಕ, ಮುತ್ತಯ್ಯ, ಪ್ರವೀಣ್ ಕುಮಾರ್ ಮತ್ತಿತರರಿದ್ದರು.