ಬಜತ್ತೂರು ‘ಟೋಲ್‌ಗೇಟ್’ ಎಸ್‌ಡಿಪಿಐ ಪ್ರತಿಭಟನೆ ಎಚ್ಚರಿಕೆ
ಪುತ್ತೂರು: ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ನಿಯಮ ಉಲ್ಲಂಘನೆ ಮೂಲಕ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮ ವಳಾಲುಬೈಲಿನಲ್ಲಿ ಹೊಸ ಟೋಲ್ ಪ್ಲಾಜಾ ನಿರ್ಮಾಣ ಮಾಡಲಾಗುತ್ತಿದ್ದು, ಇದು ಹೆದ್ದಾರಿ ಪ್ರಾಧಿಕಾರದ ಲೂಟಿ ಹೊಡೆಯುವ ಹಾಗೂ ಹಗಲು ದರೋಡೆಯ ತಂತ್ರವಾಗಿದೆ. ಅವೈಜ್ಞಾನಿಕವಾಗಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಮಾಡದೆ ಬಜತ್ತೂರಿನ ಟೋಲ್ ಗೇಟ್ ಪ್ರಾರಂಭಿಸಿದರೆ ಸಾರ್ವಜನಿಕರ ನೆರವಿನೊಂದಿಗೆ ಎಸ್‌ಡಿಪಿಐ ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿರೋಡ್ ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರ ಮಧ್ಯೆಯೇ ವಳಾಲು ಬೈಲಿನಲ್ಲಿ ಈ ಟೋಲ್ ಗೇಟ್ ವ್ಯವಸ್ಥೆ ಮಾಡಲಾಗುತ್ತಿದೆ. ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಕನಿಷ್ಟ 60 ಕಿಮೀ ಅಂತರದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ. ಈ ನಿಯಮದನ್ವಯ ವಳಾಲಿನಲ್ಲಿ ಟೋಲ್ ಸಂಗ್ರಹ ಮಾಡಲು ಅವಕಾಶ ಇಲ್ಲ. ಯಾಕೆಂದರೆ ಬ್ರಹ್ಮರಕೂಟ್ಲುನಲ್ಲಿ ಈಗಾಗಲೇ ಟೋಲ್ ಗೇಟ್ ವ್ಯವಸ್ಥೆ ಇದೆ. ಮಂಗಳೂರು- ಬೆಂಗಳೂರು ನಡುವೆ ಈಗಾಗಲೇ 5 ಟೋಲ್ ಗಳಿದ್ದು, ವಳಾಲು ಹಾಗೂ ಬ್ರಹ್ಮರಕೂಟ್ಲು ಟೋಲ್ ಗೇಟ್ ಸೇರ್ಪಡೆಯಾದರೆ 7 ಟೋಲ್ ಗಳಾಗಲಿವೆ. ಇದು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಕೆಲಸವಾಗಲಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದವರು ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಯ ಬ್ರಹ್ಮರಕೂಟ್ಲುನಲ್ಲಿರುವ ಟೋಲ್ ಗೇಟ್ ಅತ್ಯಂತ ಅವೈಜ್ಞಾನಿಕರ ಸ್ಥಿತಿಯಲ್ಲಿದೆ. ಮೊದಲು ಈ ಟೋಲ್ ಗೇಟ್ ರದ್ದು ಮಾಡಬೇಕು. ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕವೇ ಟೋಲ್ ಗೇಟ್ ನಿರ್ಮಾಣವಾಗಬೇಕು. ಒಂದು ವೇಳೆ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಪ್ರಾರಂಭಿಸಿದರೆ ಸ್ಥಳೀಯ ವಾಹನಗಳಿಗೆ ಶುಲ್ಕ ರಹಿತ ಓಡಾಟಕ್ಕೆ ಪೂರ್ಣ ಅವಕಾಶ ನೀಡಬೇಕು. ಇಲ್ಲವಾದರೆ ಎಸ್‌ಡಿಪಿಐ ಜನತೆಯ ಸಹಕಾರದೊಂದಿಗೆ ಪ್ರತಿರೋಧ ಒಡ್ಡಲಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.