‘ಎಂಸಿಎಫ್ ಹೆಸರು ಮರಳಿ ಇಡಲು ಆಗ್ರಹ’: ನಾಮಫಲಕ ತೆಗೆದು ಹಾಕುವ ಎಚ್ಚರಿಕೆ
ತನ್ನ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಸಿಎಫ್ ಹೆಸರನ್ನು ಮರು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೂಡಲೆ ಮಧ್ಯ ಪ್ರವೇಶ ಮಾಡಬೇಕು. ಇಲ್ಲದಿದ್ದರೆ ನಾನೇ ಖುದ್ದಾಗಿ ತೆರಳಿ ನಾಮಫಲಕವನ್ನು ತೆಗೆದು ಹಾಕಲಿದ್ದೇನೆ. ಅಲ್ಲದೆ ಈ ಕಾರ್ಖಾನೆಗೆ ನೀರು ಪೂರೈಕೆ ಮಾಡುವ ಬಗ್ಗೆಯೂ ಪರಿಶೀಲನೆ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರ ಜತೆ ಮಾತುಕತೆ ನಡೆಸಲಿದ್ದೇನೆ. ಮುಂದಿನ ಹಂತದಲ್ಲಿ ಉಪವಾಸ ಸತ್ಯಾಗ್ರಹದ ಉದ್ದೇಶ ಇದ್ದು, ಇದಕ್ಕೆ ಅವಕಾಶ ಕೊಡಬೇಡಿ ಎಂದು ಎಚ್ಚರಿಸಿದರು.
ಎಂಸಿಎಫ್ ಕಾರ್ಖಾನೆ 1971ರಲ್ಲಿ ಜಂಟಿ ಉದ್ಯಮವಾಗಿ ಅಸ್ತಿತ್ವಕ್ಕೆ ಬಂದು 55 ವರ್ಷ ಕಳೆದಿದೆ. 15 ವರ್ಷ ಸರ್ಕಾರಿ ಒಡೆತನದಲ್ಲಿದ್ದು, 35 ವರ್ಷ ಖಾಸಗಿ ಒಡೆತನದಲ್ಲಿದ್ದರೂ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ ಎಂಬ ಹೆಸರು ಬದಲಾಗಿರಲಿಲ್ಲ. ಈ ಕಾರ್ಖಾನೆಗೆ ಭೂಮಿ ನೀಡಿದ್ದು ಮಂಗಳೂರಿನ ಜನತೆ. ಸ್ಥಳೀಯ ಜನರ ತ್ಯಾಗ ಈ ಕಾರ್ಖಾನೆಯ ಸ್ಥಾಪನೆಯ ಹಿಂದೆ ಇದೆ. ಅದು ಬಳಸುವ ನೀರು ಕೂಡ ನಮ್ಮದೇ. ಹೀಗಿರುವಾಗ ಏಕಾಏಕಿ ಹೆಸರು ಬದಲಾವಣೆ ಮಾಡಿದ್ದು ಮಂಗಳೂರಿನ ಅಸ್ಮಿತೆಯನ್ನು ಪ್ರಶ್ನೆ ಮಾಡಿದಂತಾಗಿದೆ. ಈ ಕುರಿತು ವಿಧಾನ ಪರಿಷತ್‌ನಲ್ಲೂ ಧ್ವನಿ ಎತ್ತುವುದಾಗಿ ತಿಳಿಸಿದರು.
1991ರಲ್ಲಿ ಎಂಸಿಎಫ್ ಆಡಳಿತವನ್ನು ಯುಬಿ ಕಂಪೆನಿಗೆ ನೀಡಲಾಗಿತ್ತು. 2015ರಲ್ಲಿ ಬಿರ್ಲಾ ಗ್ರೂಪ್ ಪಾಲಾಯಿತು. ಬಳಿಕ ಝುವಾರಿ, ಪಿಪಿಎಲ್ ಮತ್ತು ಎಂಸಿಎಫ್ ಒಡೆತನ ಪಡೆದಿದ್ದ ಅಡ್ವೆಂಝ್ಸ್ ಗ್ರೂಪ್ ಕಳೆದ ಅಕ್ಟೋಬರ್‌ನಲ್ಲಿ ಎರಡು ರಸಗೊಬ್ಬರ ಕಂಪೆನಿಗಳನ್ನು ಪ್ಯಾರಾದೀಪ್ ಪಾಸ್ಫೇಟ್ಸ್ ಜತೆ ವಿಲೀನಗೊಳಿಸಿದ ಬಳಿಕ ಎಂಸಿಎಫ್ ಹೆಸರು ಇತಿಹಾಸ ಸೇರಿದೆ. 1990ರಲ್ಲಿ ಇದ್ದ ಒಂದು ಸಾವಿರ ಕಾಯಂ ಸಿಬ್ಬಂದಿಗಳ ಸಂಖ್ಯೆ ಈಗ 450ಕ್ಕೆ ಕುಸಿದಿದೆ. ಸ್ಥಳೀಯ ಜನರಿಗೆ ಮೀಸಲಾಗಿದ್ದ ಉದ್ಯೋಗಗಳು ಈಗ ಹೊರ ಪ್ರದೇಶದವರ ಪಾಲಾಗುತ್ತಿವೆ ಎಂದು ಆರೋಪಿಸಿದರು.
ಎಂಸಿಎಫ್ ಹೆಸರಿನ ಜತೆ ಮಂಗಳೂರಿನ ಜನತೆ 5 ದಶಕಗಳ ಅನ್ಯೋನ್ಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ವಿಲೀನದ ಹೆಸರಿನಲ್ಲಿ ಕಾರ್ಖಾನೆಯ ಹೆಸರನ್ನೇ ತಮಗೆ ಬೇಕಾದಂತೆ ಬದಲಿಸುವುದು ಸಲ್ಲದು, ಇದನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ. ಇದೀಗ 500ಕ್ಕೂ ಹೆಚ್ಚು ಮಾಜಿ ಉದ್ಯೋಗಿಗಳು ಒಂದಾಗಿ ಎಂಸಿಎಫ್ ಹೆಸರು ಉಳಿಸುವ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಕೂಡಲೆ ಕಾರ್ಖಾನೆಯ ಆಡಳಿತ ವರ್ಗ ಇಲ್ಲಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ ತಕ್ಷಣ ಎಂಸಿಎಫ್ ಹೆಸರನ್ನೇ ಮರು ಸ್ಥಾಪಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಎಂಸಿಎಫ್‌ನ ಮಾಜಿ ಉದ್ಯೋಗಿಗಳಾದ ಮ್ಯಾಕ್ಸಿಮ್ ಆಲ್ಫ್ರೆಡ್ ಡಿಸೋಜ, ಮೊಹಮ್ಮದ್ ಅಲಿ, ಶಾಹಿಲ್ ಹಮೀದ್, ಎಂಸಿಎಫ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಕೆ ಉಪಸ್ಥಿತರಿದ್ದರು.