ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ
Friday, January 16, 2026
ಮಂಗಳೂರು: ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಬೆಳ್ತಂಗಡಿ ಕನ್ಯಾಡಿ 1 ಗ್ರಾಮದ ಅಂಡೀರುಮಾರು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ(62) ಚಿರತೆ ದಾಳಿಯಿಂದ ಗಾಯಗೊಂಡವರು.
ಮಂಜಪ್ಪ ನಾಯ್ಕ ಇಂದು ಬೆಳಗ್ಗೆ 8.15ರ ಸುಮಾರಿಗೆ ಮನೆಯ ಅಂಗಳದಲ್ಲಿದ್ದ ವೇಳೆ ಏಕಾಏಕಿ ನುಗ್ಗಿದ ಚಿರತೆಯೊಂದು ಅವರ ಮೇಲೆ ದಾಳಿ ನಡೆಸಿದೆ. ತಕ್ಷಣ ಹತ್ತಿರದ ಅಡಿಕೆ ಮರವನ್ನೇರಿ ಅವರು ಜೀವ ಉಳಿಸಿಕೊಂಡಿದ್ದಾರೆ.
ಈ ವೇಳೆ ಮಂಜಪ್ಪ ನಾಯ್ಕ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ.