‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’

‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’


ಮಂಗಳೂರು: ಸೇವಾ ಭಾರತಿ ಮಂಗಳೂರು ಇದರ ಅಂಗಸಂಸ್ಥೆ ಆಶಾಜ್ಯೋತಿ ವತಿಯಿಂದ ಕೆನರಾ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾನುವಾರ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ನಡೆಯಿತು.

ವಿಶಿಷ್ಟ ಮೇಳದಲ್ಲಿ ದಿವ್ಯಾಂಗರು ಹಾಡಿದರು, ನಲಿದರು, ಮನದಣಿಯೆ ಕುಣಿದಾಡಿದರು.

ಪಾನಿಪುರಿ, ಬೇಲ್ಪುರಿ ರುಚಿ ಸವಿದು, ಐಸ್‌ಕ್ಯಾಂಡಿ ಐಸಿಕ್ರೀಮ್ ಮೆಲ್ಲುತ್ತಾ, ಸಕ್ಕರೆ ಮಿಠಾಯಿ ಬಾಯಿಗಿರಿಸುತ್ತಾ, ಉಂಡೆ, ಚಕ್ಕುಲಿ ತಿನ್ನುತ್ತಾ, ಕುದುರೆ ಏರಿ, ಒಂಟೆ ಸವಾರಿ ನಡೆಸಿ, ತಿರುಗುವ ತೊಟ್ಟಿಲಿನಲ್ಲಿ ಕುಳಿತು ಜಾತ್ರೆ ಸಂಭ್ರಮವನ್ನು ದಿವ್ಯಾಂಗರು ಅನುಭವಿಸಿದರು. 

ಜಾತ್ರೆ, ಉತ್ಸವಗಳಿಗೆ ತೆರಳಲಾಗದ ದಿವ್ಯಾಂಗರಿಗೆ ಆಶಾಜ್ಯೋತಿ ಸಂಸ್ಥೆ ಈ ಅವಕಾಶ ಕಲ್ಪಿಸಿತ್ತು. ದಿವ್ಯಾಂಗರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಅವರಲ್ಲಿ ಚೈತನ್ಯ, ವಿಶ್ವಾಸ ತುಂಬಿಸುವುದು ಮೇಳದ ಉದ್ದೇಶವಾಗಿತ್ತು.

ಸಾವಿರಕ್ಕೂ ಅಧಿಕ ಮಂದಿ ದಿವ್ಯಾಂಗರು ಭಾಗಿ: 

ವಿಶಿಷ್ಟರಿಗಾಗಿ ವಿಶಿಷ್ಟ ಮೇಳದಲ್ಲಿ ದಿವ್ಯಾಂಗರು ಪ್ರತಿಕ್ಷಣವನ್ನೂ ಆನಂದಿಸಿದ್ದಾರೆ. ಈ ಬಾರಿ ಒಂದು ಸಾವಿರಕ್ಕೂ ಅಧಿಕ ಮಂದಿ ದಿವ್ಯಾಂಗರು ಭಾಗವಹಿಸಿದ್ದಾರೆ. ಸಾಮಾನ್ಯವಾಗಿ ಜಾತ್ರೆಗಳಿಗೆ ದಿವ್ಯಾಂಗರನ್ನು ಕರೆದುಕೊಂಡು ಹೋಗುವುದಿಲ್ಲ. ಆದರೆ, ಈ ಮೇಳದಲ್ಲಿ ಜಾತೆಯ ಸನ್ನಿವೇಶ ಸೃಷ್ಟಿಸಿ ದಿವ್ಯಾಂಗರಿಗೆ ಆರೋಗ್ಯಪೂರ್ಣ ವಾತಾವರಣ ಕಲ್ಪಿಸಲಾಗಿದೆ. ದಿವ್ಯಾಂಗರು ವಿಶಿಷ್ಟ ಮೇಳದಲ್ಲಿ ಖುಷಿಪಟ್ಟಿದ್ದಾರೆ ಎಂದು ಆಶಾಜ್ಯೋತಿ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ತಿಳಿಸಿದ್ದಾರೆ.

ಉದ್ಘಾಟನೆ:

ನಿಟ್ಟೆ ವಿಶ್ವವಿದ್ಯಾಲಯ ಉಪ ಸಹ ಕುಲಪತಿ ಡಾ. ಶಾಂತಾರಾಮ್ ಶೆಟ್ಟಿ ಅವರು ವಿಶಿಷ್ಟರಿಗಾಗಿ ವಿಶಿಷ್ಟ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಸೇವಾ ಭಾರತಿ ಮೂಲಕ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ ಆಯೋಜಿಸುತ್ತಿರುವುದು ಶ್ಲಾಘನೀಯ. ದೇಶದಲ್ಲಿ ಶೇ.2ರಷ್ಟು ಜನತೆ ದಿವ್ಯಾಂಗರಿದ್ದಾರೆ. ದಿವ್ಯಾಂಗರಿಗೆ ಅನುಕಂಪ ಬೇಡ, ಸಮಾನ ಅವಕಾಶ ನೀಡಿ. ದಿವ್ಯಾಂಗರ ಪ್ರತಿಭೆಗೆ ಉತ್ತೇಜನ ನೀಡುವುದು ನಮ್ಮ ಕರ್ತವ್ಯ ಎಂದರು.

ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ವಿನಯ ಭಟ್, ಎಂಆರ್‌ಪಿಎಲ್ ಮಂಗಳೂರು ಮಾನವ ಸಂಪನ್ಮೂಲ ವಿಭಾಗದ ಜಿಜಿಎಂ ಕೃಷ್ಣ ಹೆಗ್ಡೆ ಮಿಯಾರ್, ಕೆನರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಿ. ವಾಸುದೇವ ಕಾಮತ್ ಅತಿಥಿಯಾಗಿದ್ದರು.

ದ.ಕ., ಉಡುಪಿ ಜಿಲ್ಲೆಗಳ ವಿಶೇಷ ಶಾಲೆಗಳ ಮಕ್ಕಳ ಸಹಿತ ಎಲ್ಲ ವಯೋಮಾನದ ದಿವ್ಯಾಂಗರು ಭಾಗವಹಿಸಿದ್ದರು. 18 ವರ್ಷ ಮೇಲ್ಪಟ್ಟ ಸ್ವಲೀನತೆ (ಆಟಿಸಂ), ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತ ದಿವ್ಯಾಂಗರಿಗೆ ಕಾನೂನು ಬದ್ಧ ಪೋಷಕತ್ವ ಪ್ರಮಾಣ ಪತ್ರ ಪಡೆಯುವ ಬಗ್ಗೆ ಮತ್ತು ನಿರಾಮಯ ಆರೋಗ್ಯ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ‘ಸಕ್ಷಮ’ ಸಂಸ್ಥೆಯ ವತಿಯಿಂದ ದಿವ್ಯಾಂಗರ ಸಬಲೀಕರಣ ಮತ್ತು ನೇತ್ರದಾನದ ಬಗ್ಗೆ ಮಾಹಿತಿ ಒದಗಿಸಲಾಯಿತು. 7 ಮಂದಿ ದಿವ್ಯಾಂಗ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು.

ಆಶಾಜ್ಯೋತಿ ಅಧ್ಯಕ್ಷೆ ಗೀತಾ ಲಕ್ಷ್ಮೀಶ, ಚೇತನಾ ಶಾಲೆ ಮುಖ್ಯಶಿಕ್ಷಕಿ ಸುಪ್ರೀತಾ, ಸೇವಾಭಾರತಿ ಮಂಗಳೂರು ಗೌರವ ಕಾರ್ಯದರ್ಶಿ ಎಚ್. ನಾಗರಾಜ ಭಟ್, ಆಶಾಜ್ಯೋತಿ ಜೊತೆ ಕಾರ್ಯದರ್ಶಿ ಗಣರಾಜ ವೈ., ಖಜಾಂಚಿ ಕೆ. ವಿಶ್ವನಾಥ ಪೈ, ಜೊತೆ ಕಾರ್ಯದರ್ಶಿ ಫಣೀಂದ್ರ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article