ಕಾ. ಅನಂತಸುಬ್ಬ ರಾವ್ ಅವರ ನಿಧನಕ್ಕೆ ಸಂತಾಪ
ಮಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) ಕರ್ನಾಟಕ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಕರ್ನಾಟಕ ಇದರ ಅತ್ಯುನ್ನತ ನಾಯಕ ಕಾ. ಎಚ್.ವಿ. ಅನಂತಸುಬ್ಬ ರಾವ್ ಅವರು ತನ್ನ ೮೬ನೇ ವಯಸ್ಸಿನಲ್ಲಿ ಜ.28 ರಂದು ಸಂಜೆ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ನಮಗೆ ಆಘಾತವಾಗಿದೆ.
ಕಾ. ಅನಂತಸುಬ್ಬರಾಯರು ಎಲ್‌ಐಸಿಯಲ್ಲಿ ತಮ್ಮ ಉದ್ಯೋಗವನ್ನು ಪ್ರಾರಂಭಿಸಿದಂದೇ ಕಾರ್ಮಿಕರ ಭವಣೆಗಳ ಬಗ್ಗೆ ಬಹಳಷ್ಟು ಅಭ್ಯಶಿಸಿ ಕಾರ್ಮಿಕರ ಶ್ರೇಯೋಭಿವೃದ್ದಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು. ಮುಂದೆ ಎಐಟಿಯುಸಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ನೌಕರರ ಸ್ಥಿತಿಗತಿಗಳನ್ನು ಅಭ್ಯಶಿಸಿ, ಅಲ್ಲಿ ಎಐಟಿಯುಸಿ ಯೂನಿಯನ್ ಸ್ಥಾಪಿಸಿ, ಅಲ್ಲಿನ ನೌಕರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಯಶಸ್ವಿಯಾದರು.
ಮುಂದೆ ಬೆಂಗಳೂರು ಮತ್ತು ಆಸುಪಾಸಿನಲ್ಲಿ ಕಾರ್ಮಿಕರ ಯೂನಿಯನ್‌ಗಳನ್ನು ಸಂಘಟಿಸಿ ಅವರಿಗೆ ಅನೇಕ ಸೌಲಭ್ಯಗಳನ್ನು ಕೊಡಿಸುವಲ್ಲಿ ಯಶಸ್ವಿಯಾದರು. ಅವರು ಎಐಟಿಯುಸಿ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ ಧೀರ್ಘಕಾಲದ ಸೇವೆ ಸಲ್ಲಿಸಿದ್ದಾರೆ. ಅವರು ಸಿಪಿಐ ಪಕ್ಷದ ಅತ್ಯುನ್ನತ ಮುಂದಾಳಾಗಿದ್ದು ಸಿಪಿಐ ಕರ್ನಾಟಕ ರಾಜ್ಯ ಸಮಿತಿಯ ಖಜಾಂಗಿಯಾಗಿಯೂ ಬಹಷ್ಟು ಕಾಲ ಸೇವೆ ಸಲ್ಲಿಸಿದ್ದಾರೆ.
ಅವರ ಮರಣಕ್ಕೆ ಸಿಪಿಐನ ಶೇಖರ್ ಬಂಟ್ವಾಳ, ವಿ. ಕುಕ್ಯಾನ್, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಹಾಗೂ ಎಐಟಿಯುಸಿಯ ಎಚ್.ವಿ. ರಾವ್, ಸೀತಾರಾಮ ಬೇರಿಂಜ, ಸುರೇಶ್ ಕುಮಾರ್, ಎ. ಪ್ರಭಾಕರ ರಾವ್, ರಿಜಿನಾಲ್ಡ್ ಸೋನ್ಸ್, ಕರುಣಾಕರ ಮಾರಿಪಳ್ಳ ಮತ್ತಿತರರು ಸಂತಾಪ ಸೂಚಿಸಿದ್ದಾರೆ.