ಅರಣ್ಯ ಇಲಾಖೆಯಿಂದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ
ಬಂಟ್ಚಾಳ ತಾಲೂಕು ಆರೋಗ್ಯಾಧಿಕಾರಿ ಅಶೋಕ್ ರೈ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸರಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೋರ್ವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು, ಯಾವುದೇ ಸಣ್ಣ ಪುಟ್ಟ ವ್ಯತ್ಯಾಸಗಳು ಕಂಡುಬಂದರೂ ಉದಾಸೀನ ತೋರದೆ ತಕ್ಷಣ ವೈದ್ಯಕೀಯ ಸಲಹೆ ಪಡೆದುಕೊಳ್ಳ ಬೇಕು ಎಂದು ತಿಳಿಸಿದರು.
ಅರಣ್ಯ ಅಥವಾ ಇನ್ನಿತರ ಕಡೆಗಳಲ್ಲಿ ಬೆಂಕಿಯನ್ನು ನಂದಿಸುವ ಸಂದರ್ಭಗಳಲ್ಲಿ ಸಿಬ್ಬಂದಿಗಳಿಗೆ ಅವಘಡ ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ಮಾತನಾಡಿ, ಪ್ರಕೃತಿ, ವನ್ಯ ಜೀವಿಗಳಿಗೆ ಮತ್ತು ಮನುಷ್ಯರಿಗೆ ಬೆಂಕಿಯಿಂದ ಯಾವುದೇ ಹಾನಿಯಾಗದಂತೆ ಇಲಾಖೆ ಸಕಾಲದಲ್ಲಿ ಸ್ಪಂದಿಸಿ, ಮಾಡುವ ಪ್ರಯತ್ನ ಶ್ಲಾಘನೀಯವಾಗಿದೆ. ಪ್ರತಿ ಬೇಸಿಗೆ ಕಾಲದಲ್ಲಿ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆ ಕ್ರಮವನ್ನು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸೋಣ ಎಂದು ತಿಳಿಸಿದರು.
ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುನಿಲ್ ಜೆ.ಬಿ. ಡಿ’ಸೋಜ, ಅಗ್ನಿಶಾಮಕ ದಳದ ಅಧಿಕಾರಿ ಸತೀಶ್ ಉಪಸ್ಥಿತರಿದ್ದರು.
ಉಪವಲಯ ಅರಣ್ಯಾಧಿಕಾರಿ ರವಿರಾಜ್ ಬಿ. ಸ್ವಾಗತಿಸಿ, ಮಂಗಳೂರು ಉಪವಲಯ ಅರಣ್ಯಾಧಿಕಾರಿ ಮೋಹನ್ ಜಿ. ಗಂಟೆ ವಂದಿಸಿದರು. ಉಪವಲಯ ಅರಣ್ಯಾಧಿಕಾರಿ ರವಿರಾಜ್ ಬಿ. ಅವರು ಕಾರ್ಯಕ್ರಮ ನಿರೂಪಿಸಿದರು.