ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲು 70 ಕೋಟಿ ಅನುದಾನ
ಮಂಗಳೂರು: ಮಂಗಳೂರಿನ ಹೆಮ್ಮೆಯ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, 70 ಕೋಟಿ ಅನುದಾನ ನೀಡಲಾಗುತ್ತಿದ್ದು ಮೊದಲ ಹಂತದಲ್ಲಿ ನೂತನ ಹೊರರೋಗಿ ವಿಭಾಗ ನಿರ್ಮಾಣಕ್ಕೆ 35 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವಂತೆ ಬೃಹತ್ ಅನುದಾನದೊಂದಿಗೆ ಹೈಟೆಕ್ ಸ್ಪರ್ಶ ನೀಡುವ ಈ ಮಹತ್ವದ ಯೋಜನೆಗೆ ಚಾಲನೆ ದೊರೆತಿದೆ. ಪಾರದರ್ಶಕವಾಗಿ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿ ಕಾಮಗಾರಿಯನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ಪೂರೈಕೆ ನಮ್ಮ ಬದ್ಧತೆಯಾಗಿದ್ದು ವೆಲ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಇಸ್ಕಾನ್ ಸಂಸ್ಥೆಯ ಮೂಲಕ ಸಮತೋಲಿತ ಆಹಾರ ಒದಗಿದುವ ತೀರ್ಮಾನ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಾಗೂ ಆರೋಗ್ಯ ಸಚಿವನಾಗಿ ಕರಾವಳಿ ಜನತೆಗೆ ಸುಸಜ್ಜಿತವಾದ ಆಸ್ಪತ್ರೆ ಹಾಗೂ ಎಲ್ಲ ಸೌಲಭ್ಯವನ್ನು ಒಂದೇ ಸೂರಿನಡಿ ಒದಗಿಸಬೇಕೆಂಬ ಸದುದ್ದೇಶ ಈಗ ಸಾಕಾರಗೊಳ್ಳುತ್ತಿದೆ. ಸಚಿವ ಸಂಪುಟದ ಒಪ್ಪಿಗೆ ಪಡೆದಿರುವ ಈ ಯೋಜನೆ ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಜನರಿಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ತಲುಪಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.