ವಿಜ್ಞಾನವನ್ನು ಕಲಾತ್ಮಕ ದೃಷ್ಟಿಕೋನದಿಂದ ನೋಡಬೇಕು: ಚಂದ್ರು ಅಯ್ಯರ್
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ತವ್ಯಪ್ರಜ್ಞೆ, ಕಠಿಣ ಪರಿಶ್ರಮ ಮತ್ತು ಶಿಸ್ತು ಸಾಧನೆಗೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಉತ್ಪಾದನೆಯ ದಕ್ಷತೆಯನ್ನು ಹೆಚ್ಚಿಸುವ ವಿಚಾರದಲ್ಲಿ ಧನಾತ್ಮಕವಾಗಿ ಚಿಂತಿಸಬೇಕು. ಪರಸ್ಪರ ಗೌರವ ಮತ್ತು ಕಠಿಣ ಪರಿಶ್ರಮದಿಂದ ಯಾವುದೇ ವ್ಯಕ್ತಿ ಸಾಧನೆಯ ಶಿಖರವನ್ನೇರುತ್ತಾನೆ ಎಂದರು.
ಇದಕ್ಕೂ ಮೊದಲು ಉಪನ್ಯಾಸಕರೊಂದಿಗೆ ಮಾತನಾಡಿದ ಅವರು, ಭಾರತದ ವಿದ್ಯಾರ್ಥಿಗಳು ಇಂಗ್ಲೆಂಡಿನ ಅವಿಭಾಜ್ಯ ಅಂಗವಾಗಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ಸ್ಥಾನಮಾನವಿದೆ. ಮಕರ ಸಂಕ್ರಾಂತಿ ಹಬ್ಬ ಆಚರಿಸುತ್ತಾರೆ ಎಂದು ಭಾರತ ಮತ್ತು ಇಂಗ್ಲೆಂಡಿನ ಸಾಂಸ್ಕೃತಿಕ ಹಾಗು ಶೈಕ್ಷಣಿಕ ಸಂಬಂಧಗಳನ್ನು ವಿವರಿಸಿದರು.
‘ಮಂಗಳೂರು ಮಿಷನ್’:
‘ಮಂಗಳೂರು ಮಿಷನ್’ ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯತತ್ಪರವಾಗಿದ್ದು, ದಕ್ಷಿಣ ಕನ್ನಡ ನನ್ನ ಹೃದಯದಲ್ಲಿದೆ. ಬೆಂಗಳೂರು ಹೊರತಾಗಿ ಮಂಗಳೂರಿನ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಲಿದೆ ಎಂದರು.
ಭವಿಷ್ಯದ ಕೌಶಲ:
ತಂತ್ರಜ್ಞಾನ ಭದ್ರತಾ ಉಪಕ್ರಮ(ಟಿಎಸ್‌ಐ) ಭಾರತದ ಭವಿಷ್ಯದ ಕೌಶಲವಾಗಿದೆ. ಎಕ್ಸ್ ಪರ್ಟ್ ವಿದ್ಯಾರ್ಥಿಗಳು ಪ್ರೊ.ನರೇಂದ್ರ ಎಲ್. ನಾಯಕ್ ಅವರ ದೂರದರ್ಶಿತ್ವ ಮತ್ತು ಸಮರ್ಥ ಮಾರ್ಗದರ್ಶನದಲ್ಲಿ ಪರಿಣಾಮಕಾರಿ ಗುರಿ ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದರು. ಅವರ ನೇತೃತ್ವದಲ್ಲಿ ಭವಿಷ್ಯದ ಯುವ ನಾಯಕರು ತಯಾರಾಗುತ್ತಿದ್ದಾರೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಪೂರಕವಾಗಿ ಬುನಾದಿ ಶಿಕ್ಷಣ ಇಲ್ಲಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್ ನಾಯಕ್, ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್, ತಂತ್ರಜ್ಞಾನ, ಶಿಕ್ಷಣ, ಕೌಶಲ್ಯ ಮತ್ತು ನಾವೀನ್ಯತೆಯ ಮುಖ್ಯಸ್ಥ ಎಂ. ರೋರಿ ಪಿಕಾರ್ಡೊ, ಒಳಮುಖ ಹೂಡಿಕೆಯ ಹಿರಿಯ ಸಲಹೆಗಾರ್ತಿ ಲೀನಾ ಪೌಲ್, ಒಳಮುಖ ಹೂಡಿಕೆಯ ಸಲಹೆಗಾರ ಚೇತನ್ ಜಿ.ಎಂ., ಸಾರಿಗೆ ಮತ್ತು ಶಿಷ್ಟಾಚಾರ ಅಧಿಕಾರಿ ಎಂ. ಮುರುಗನ್ ಉಪಸ್ಥಿತರಿದ್ದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ಸ್ವಾಗತಿಸಿದರು. ಉಪಪ್ರಾಶುಪಾಲೆ(ಆಡಳಿತ) ಧೃತಿ ವಿ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.