ಬಾಲಕನಿಗೆ ಲೈಂಗಿಕ ಕಿರುಕುಳ: ವೈದ್ಯನ ವಿರುದ್ಧ ಫೋಕ್ಸೊ ಪ್ರಕರಣ ದಾಖಲು
ಮಂಗಳೂರು: ಚಿಕಿತ್ಸೆಗೆಂದು ದಾಖಲಾಗಿದ್ದ ಹದಿನೈದು ವರ್ಷದ ಅಪ್ರಾಪ್ತ ಬಾಲಕನಿಗೆ ಇಂಟರ್ನ್‌ಶಿಪ್ ವೈದ್ಯರೊಬ್ಬರು ಲೈಂಗಿಕ ಕಿರುಕುಳವೆಸಗಿದ್ದು, ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಸಿದ ಘಟನೆ ದೇರಳಕಟ್ಟೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಆರೋಪಿ ವೈದ್ಯನ ವಿರುದ್ಧ ಫೋಕ್ಸೊ ಪ್ರಕರಣ ದಾಖಲಾಗಿದೆ.
ಉಳ್ಳಾಲ ತಾಲೂಕಿನ ವಸತಿ ಶಾಲೆಯೊಂದರ ಹಿಂದು ಸಮುದಾಯದ ಹದಿನೈದು ವರ್ಷದ ಅಪ್ರಾಪ್ತ ಬಾಲಕನಿಗೆ ಸಣ್ಣ ಮಟ್ಟದ ಮಾನಸಿಕ ರೋಗ ಬಾಧಿಸುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಪೋಷಕರು ಬಾಲಕನನ್ನ ಕಳೆದ ಡಿಸೆಂಬರ್ 12 ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದರು.
ಅಂದು ಮಧ್ಯಾಹ್ನ 3.15 ಗಂಟೆ ಸುಮಾರಿಗೆ ಇಂಟರ್ನಿ ವೈದ್ಯನೆಂದು ಹೇಳಿಕೊಂಡು ಬಂದ ಮಹಮ್ಮದ್ ಆಲಿ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತ ಬಾಲಕನಲ್ಲಿ ಅಸಭ್ಯವಾಗಿ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡಿ, ಅನುಚಿತವಾಗಿ ವರ್ತಿಸಿದ್ದಾನೆ. ಈ ವಿಚಾರವನ್ನು ಪೋಷಕರಿಗೆ ತಿಳಿಸದಂತೆ ಬೆದರಿಕೆಯೊಡ್ಡಿದ್ದಾನೆ.
ಆರೋಪಿ ಮಹಮ್ಮದ್ ಆಲಿ ನೀಡಿರುವ ಲೈಂಗಿಕ ಕಿರುಕುಳದ ಬಗ್ಗೆ ಸಂತ್ರಸ್ತ ಬಾಲಕ ತನ್ನ ಸಹೋದರ ಮತ್ತು ತಾಯಿಯಲ್ಲಿ ಹೇಳಿಕೊಂಡಿದ್ದ. ಅಪ್ರಾಪ್ತ ಮಗನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ವಿಚಾರ ತಿಳಿದ ತಾಯಿ ಆಘಾತದಿಂದ ಕುಸಿದು ಅಸ್ವಸ್ಥಳಾಗಿದ್ದು ಆಕೆಗೆ ಅದೇ ಆಸ್ಪತ್ರೆಯಲ್ಲೇ ಚಿಕಿತ್ಸೆಯನ್ನ ನೀಡಲಾಗಿತ್ತು.
ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಬಾಲಕನ ತಂದೆ ಡಿ.29 ರಂದು ಆರೋಪಿ ಮಹಮ್ಮದ್ ಆಲಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಮಹಮ್ಮದ್ ಆಲಿ ತನ್ನ ಅಪ್ರಾಪ್ತ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಘಟನೆಯಿಂದ ತನ್ನ ಮಗನಲ್ಲಿ ಭಯ, ಆತಂಕದಿಂದ ಮಾನಸಿಕ ಖಿನ್ನತೆಗೀಡಾಗಿದ್ದಾನೆ. ಮಾನಸಿಕ ಆಘಾತದ ಲಕ್ಷಣಗಳು ಕಾಣಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಉಳ್ಳಾಲ ಠಾಣೆ ಪೊಲೀಸರು ಆರೋಪಿ ಮಹಮ್ಮದ್ ಆಲಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.